ಸಂಪೂರ್ಣ ಅಗತ್ಯ ಇಲ್ಲದ ಹೊರತು ಕಕ್ಷೀದಾರರನ್ನು ನ್ಯಾಯಾಲಯಗಳಿಗೆ ಕರೆಸದಿರಿ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ವಕೀಲ ಸಮುದಾಯವನ್ನು ಕೋರಿದ್ದಾರೆ.
ಬೆಂಗಳೂರಿನ ಕರ್ನಾಟಕದ ಹೈಕೋರ್ಟ್‌ನಲ್ಲಿ ಹೈಬ್ರಿಡ್ ವಿಚಾರಣೆಯ ಸೌಲಭ್ಯ ಇದೆ. ವೀಡಿಯೊ-ಕಾನ್ಫರೆನ್ಸ್ ಸವಲತ್ತನ್ನು ಗರಿಷ್ಠ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ವಕಿಲ ಸಮೂಹಕ್ಕೆ ನನ್ನ ಮನವಿ. ಕಕ್ಷೀದಾರರ ಉಪಸ್ಥಿತಿ ಸಂಪೂರ್ಣ ಅಗತ್ಯವಿಲ್ಲದಿದ್ದರೆ ವಕೀಲ ಸಮುದಾಯ ನ್ಯಾಯಾಲಯಗಳಿಗೆ ಅವರನ್ನು ಕರೆಸಿಕೊಳ್ಳಬಾರದು ಎಂದು ಸಿಜೆ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವಕೀಲರಿಗೂ ಇದೇ ರೀತಿಯ ಮನವಿ ಮಾಡಲಾಗಿದೆ. ವಕೀಲರು ಪ್ರಕರಣಗಳ ಮುಂದೂಡಿಕೆಗೆ ವೀಡಿಯೊ ಕಾನ್ಫರೆನ್ಸ್ ಸೌಲಭ್ಯ ಬಳಸಬಹುದು ಎಂದು ನ್ಯಾ ಎ ಎಸ್ ಓಕಾ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು ಬೆಂಗಳೂರಿನಲ್ಲಿ ಸುಮಾರು 5,000 ಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ವಕೀಲ ಸಮುದಾಯದ ಅರ್ಹ ಸದಸ್ಯರಿಗೆ ತಕ್ಷಣ ಲಸಿಕೆ ನೀಡಲು ಹೈಕೋರ್ಟ್ ಎಲ್ಲಾ ಕ್ರಮ ಕೈಗೊಂಡಿದ್ದು ಈ ಅವಕಾಶವನ್ನು ಬಳಸಿಕೊಳ್ಳಬೇಕು. ವಕೀಲ ಸಮುದಾಯದ ಎಲ್ಲಾ ಸದಸ್ಯರು ಮತ್ತು ಸಹಭಾಗಿಗಳು ಗರಿಷ್ಠ ಪ್ರಮಾಣದಲ್ಲಿ ಸಹಕರಿಸಿದರೆ ನ್ಯಾಯಾಲಯ ಕಾರ್ಯ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರುವ ಸಂದರ್ಭ ಉದ್ಭವಿಸುವುದಿಲ್ಲ ಎಂದು ತಿಳಿಸಲಾಗಿದೆ.
ವೀಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಸಾಧ್ಯವಾದಷ್ಟು ಬಳಸಿಕೊಳ್ಳಲು ನ್ಯಾಯಾಲಯ ವಾರದ ಹಿಂದೆಯೇ ಸೂಚಿಸಿದ್ದು ಲಸಿಕೆ ಪಡೆಯುವಂತೆ ಅರ್ಹ ನ್ಯಾಯಾಂಗ ಅಧಿಕಾರಿಗಳಿಗೂ ಕರೆ ನೀಡಿತ್ತು.
ಪತ್ರವನ್ನು ಇಲ್ಲಿ ಓದಿ: