Karnataka High Court
Karnataka High Court 
ಸುದ್ದಿಗಳು

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಠೇವಣಿದಾರರಿಗೆ ಹಣ ವಾಪಸ್‌: ಆರ್‌ಬಿಐಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

Bar & Bench

ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಐದು ಲಕ್ಷಕ್ಕಿಂತ ಕಡಿಮೆ ಠೇವಣಿಯಿಟ್ಟವರಿಗೆ ಮರು ಪಾವತಿ ಮಾಡಲು ಮಂಜೂರು ಮಾಡಿದ್ದ 729 ಕೋಟಿ ರೂಪಾಯಿ ಹಣವನ್ನು ದಿ ಡೆಪಾಸಿಟ್ ಇನ್‌ಶ್ಯೂರೆನ್ಸ್ ಆ್ಯಂಡ್ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಷನ್‌ಗೆ (ಡಿಐಸಿಜಿಸಿ) ಹಿಂದಿರುಗಿಸುವ ವಿಚಾರ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಬ್ಯಾಂಕಿನ ಆಡಳಿತಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿ ಮಾಡಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ಸಿ ಎಂ ಜೋಶಿ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.

ಪ್ರತಿವಾದಿಗಳಾದ ಆರ್‌ಬಿಐ, ಅದರ ಅಧೀನ ಸಂಸ್ಥೆಯಾದ ಡಿಐಸಿಜಿಸಿ ಮತ್ತು ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಆಡಳಿತಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು 2023ರ ಜನವರಿ 3ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಬಿ ವಿ ಮಲ್ಲಾರೆಡ್ಡಿ ಅವರು “ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ದಿವಾಳಿ ಎದ್ದಿದೆ. ಇದರಿಂದ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿಗಿಂತ ಕಡಿಮೆ ಠೇವಣಿಯಿಟ್ಟ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಡಿಐಸಿಜಿಸಿ 729 ಕೋಟಿ ರೂಪಾಯಿ ಅನ್ನು ಬ್ಯಾಂಕಿಗೆ ಮಂಜೂರು ಮಾಡಿತ್ತು. ಅದರಂತೆ ಆ ಹಣವನ್ನು 5 ಲಕ್ಷ ರೂಪಾಯಿಗಿಂತ ಕಡಿಮೆ ಹಣ ಠೇವಣಿಯಿಟ್ಟಿದ್ದ ಠೇವಣಿದಾರರಿಗೆ ಪಾವತಿಸಲಾಗಿದೆ. ನಂತರ ಡಿಐಸಿಜಿಸಿ ಕಾಯಿದೆಯ ಸೆಕ್ಷನ್ 26 ಪ್ರಕಾರ ಆದೇಶ ಹೊರಡಿಸಿ, 729 ಕೋಟಿ ರೂಪಾಯಿ ಅನ್ನು ಐದು ಕಂತುಗಳಲ್ಲಿ ಮರು ಪಾವತಿಸಬೇಕು. 2022ರ ಡಿಸೆಂಬರ್‌ 31ರೊಳಗೆ ಮೊದಲ ಕಂತು ಪಾವತಿಸಬೇಕು ಎಂಬುದಾಗಿ ಸೂಚಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಇದೀಗ ಬ್ಯಾಂಕ್ ಇದೇ ಡಿಸೆಂಬರ್ ಅಂತ್ಯದೊಳಗೆ ಮೊದಲ ಕಂತಿನ ಹಣವಾಗಿ ಸುಮಾರು 145 ಕೋಟಿ ಹಣವನ್ನು ಡಿಐಸಿಜಿಸಿಗೆ ಪಾವತಿಸಬೇಕಿದೆ. ಸದ್ಯ ಬ್ಯಾಂಕಿನ ಬಳಿ 450 ಕೋಟಿ ರೂಪಾಯಿ ಹಣ ಲಭ್ಯವಿದೆ. ಅದರಲ್ಲಿ 145 ಹಣವನ್ನು ಡಿಐಸಿಜಿಗೆ ಪಾವತಿಸಿದರೆ, 300 ಕೋಟಿ ರೂಪಾಯಿ ಉಳಿಯುತ್ತದೆ. ಇದೇ ಕಾರಣ ಮುಂದಿಟ್ಟುಕೊಂಡು ಬ್ಯಾಂಕಿನ ಆಡಳಿತಾಧಿಕಾರಿಯು ಐದು ಲಕ್ಷಕ್ಕೂ ಅಧಿಕ ಠೇವಣಿಯಿಟ್ಟ ಠೇವಣಿದಾರರಿಗೆ ಹಣ ಮರು ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಆ ಠೇವಣಿದಾರರು ಸಂಕಷ್ಟಕ್ಕೆ ಗುರಿಯಾಗಿದ್ದು, ಐದು ಕಂತುಗಳಲ್ಲಿ ಹಣ ಮರು ಪಾವತಿಸಲು ಡಿಐಸಿಜಿಸಿ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಡಿಐಸಿಜಿಸಿ ಆದೇಶಕ್ಕೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತು ತಕ್ಷಣವೇ ಆದೇಶ ಹೊರಡಿಸಲು ನಿರಾಕರಿಸಿದ ಪೀಠವು ಪ್ರತಿವಾದಿಗಳಾದ ಬ್ಯಾಂಕ್, ಡಿಐಸಿಜಿಸಿ ಮತ್ತು ಆರ್‌ಬಿಐ ವಾದ ಆಲಿಸದೆ ಮಧ್ಯಂತರ ಮನವಿ ಪುರಸ್ಕರಿಸಲಾಗದು. ಸದ್ಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಅವರ ವಾದ ಮಂಡಿಸಿದ ನಂತರ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಹೇಳಿದ ಪೀಠವು ವಿಚಾರಣೆಯನ್ನು ಮುಂದೂಡಿತು.