Karnataka High Court 
ಸುದ್ದಿಗಳು

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ನಿರ್ಬಂಧ: ಮಧ್ಯಂತರ ಆದೇಶ ಅರ್ಜಿದಾರರಿಗೆ ಸೀಮಿತ ಅಸಾಧ್ಯ ಎಂದ ಹೈಕೋರ್ಟ್‌

ಪೀಠವು ಎಜಿ ಅವರನ್ನು “ಸುಪ್ರೀಂ ಕೋರ್ಟ್‌ಗೆ ಹೋಗಲಿಲ್ಲವೇ” ಎಂದಿತು. ಆಗ ಎಜಿ ಅವರು “ಆ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದರು.

Bar & Bench

ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟ ಎಂಬುದಾಗಿ ಘೋಷಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿರುವುದನ್ನು ಅರ್ಜಿದಾರರಿಗೆ ಮಾತ್ರ ಸೀಮಿತಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠ ಹೇಳಿದೆ.

ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಟ್ರಸ್ಟ್, ವಿ-ಕೇರ್ ಫೌಂಡೇಷನ್ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರನ್ನು ಕುರಿತು “ಸುಪ್ರೀಂ ಕೋರ್ಟ್‌ಗೆ ಹೋಗಲಿಲ್ಲವೇ” ಎಂದಿತು.

ಅದಕ್ಕೆ ಎಜಿ ಅವರು “ಆ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದರು. ಮುಂದುವರಿದು, “ಪ್ರಕರಣದಲ್ಲಿನ ಮಧ್ಯಂತರ ತಡೆಯನ್ನು ಅರ್ಜಿದಾರರಿಗೆ ಮಾತ್ರ ಸೀಮಿತಗೊಳಿಸಬೇಕು” ಎಂದರು.

ಅದಕ್ಕೆ ಪೀಠವು “ಇದು ಸರ್ಕಾರದ ಆದೇಶವಾಗಿರುವುದರಿಂದ ಹಾಗೆ ಮಾಡಲಾಗದು. ಅದಾಗ್ಯೂ, ನಿಮ್ಮ ವಾದವನ್ನು ಪರಿಗಣಿಸಲಾಗುವುದು” ಎಂದಿತು.

ಅಂತಿಮವಾಗಿ ಸರ್ಕಾರದ ಮೇಲ್ಮನವಿಯನ್ನು ಇತ್ಯರ್ಥಪಡಿಸುವಾಗ ವಿಭಾಗೀಯ ಪೀಠ ಉಲ್ಲೇಖಿಸಿರುವ ಅಂಶಗಳನ್ನು ಪುನರುಚ್ಚರಿಸಿ, ಮಧ್ಯಂತರ ಆದೇಶ ವಿಸ್ತರಿಸಿ, ಎಜಿ ಕೋರಿಕೆಯಂತೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿ, ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮುಂದೂಡಿತು.

ಸರ್ಕಾರದ ಆದೇಶದಲ್ಲಿ ಏನಿದೆ?

ರಾಜ್ಯದಲ್ಲಿ ಹಲವು ಖಾಸಗಿ ಸಂಸ್ಥೆಗಳು. ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವ ಹಾಗೂ ಸದಸ್ಯರು ಮತ್ತು ಬೆಂಬಲಿಗರ ಸಭೆ ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು/ಸರ್ಕಾರದ ಆಸ್ತಿ, ಜಮೀನು, ಆಟದ ಮೈದಾನ, ಸಾರ್ವಜನಿಕ ರಸ್ತೆ ಇತ್ಯಾದಿಗಳನ್ನು ಸರ್ಕಾರದ ಅಥವಾ ಸಂಬಂಧಿತ ಇಲಾಖೆ ಮುಂಚಿತವಾಗಿ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ ಎಂದು ಪರಿಗಣಿಸಲ್ಪಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟು ಮಾಡುತ್ತವೆ. ಈ ಕಾರಣದಿಂದ ಸರ್ಕಾರದ ಯಾವುದೇ ಆಸ್ತಿ/ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ/ಸ್ಥಳದ ಮಾಲೀಕತ್ವದ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳು ಅನುಮತಿ ನೀಡುವುದು ಕಡ್ಡಾಯವಾಗಿರುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

ಇದನ್ನು ಉಲ್ಲಂಘಿಸಿದರೆ ಪೊಲೀಸರು ಬಿಎನ್‌ಎಸ್‌ 2023ರ ಅಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.