ಸುದ್ದಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವ ಚಟುವಟಿಕೆಗಳಿಗೆ ನಿರ್ಬಂಧ: ಮೇಲ್ಮನವಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಅ.18ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ಆದೇಶವನ್ನು ವಿಭಾಗೀಯ ಪೀಠವು ಮಂಗಳವಾರ ಕಾಯ್ದಿರಿಸಿದೆ.

Bar & Bench

ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಆದೇಶ ಕಾಯ್ದಿರಿಸಿದೆ.

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಕೆ ಬಿ ಗೀತಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸರ್ಕಾರವು ತನ್ನ ಆಸ್ತಿ ಮತ್ತು ಸಾರ್ವಜನಿಕರ ಹಕ್ಕು ರಕ್ಷಣೆ ಮಾಡಲು 10ಕ್ಕೂ ಅಧಿಕ ಮಂದಿ ರಸ್ತೆ, ಮೈದಾನದಲ್ಲಿ ಸಮಾವೇಶ/ರ್ಯಾಲಿ ನಡೆಸುವುದನ್ನು ಕಾನೂನುಬಾಹಿರ ಎಂದಿದ್ದು, ಭಾರತೀಯ ನ್ಯಾಯ ಸಂಹಿತೆ ಅಡಿ ಅಪರಾಧ ಕೃತ್ಯ ಎಂದು ಆದೇಶ ಮಾಡಿದೆ. ಇದು ಸಕಾರಾತ್ಮಕ ಆದೇಶವಾಗಿದೆ” ಎಂದರು.

“ಏಕಸದಸ್ಯ ಪೀಠದ ಆದೇಶದಿಂದ ಸರ್ಕಾರದ ಹಕ್ಕು ಮೊಟಕಾಗಿದೆ. ಅನುಮತಿ ಪಡೆಯದೇ ಖಾಸಗಿ ಸಂಸ್ಥೆಗಳು ಸರ್ಕಾರದ ಆಸ್ತಿಯಲ್ಲಿ ಏನು ಬೇಕಾದರೂ ಮಾಡಲಾಗದು. ಜನರು ಪಾರ್ಕ್‌ನಲ್ಲಿ ಓಡಾಟ ಮಾಡುವುದರ ಬಗ್ಗೆ ಸರ್ಕಾರದ ಆದೇಶ ಮಾತನಾಡುತ್ತಿಲ್ಲ. ಅರ್ಜಿದಾರರು ಪಾರ್ಕ್‌ನಲ್ಲಿ ಓಡಾಟ ಮಾಡಬೇಕು ಎಂದು ಹೇಳುತ್ತಿಲ್ಲ. ಪಾರ್ಕ್‌ನಲ್ಲಿ ಬೋಧನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ವಿಚಾರ ಸಂಕಿರಣವನ್ನು ಸಭಾಂಗಣದಲ್ಲಿ ಅರ್ಜಿದಾರರು ನಡೆಸಬಹುದು” ಎಂದರು.

“ಉದ್ಯಾನ, ಆಟದ ಮೈದಾನಕ್ಕೆ ಸ್ಪಷ್ಟ ವ್ಯಾಖ್ಯಾನವಿದೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ರಸ್ತೆಯಲ್ಲಿ ಮೆರವಣಿಗೆ/ರ್ಯಾಲಿ/ಸಮಾವೇಶ ಮಾಡುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ತಪ್ಪೇನಿದೆ?” ಎಂದರು.

“ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕೋರಿದರೆ ಮೂರು ದಿನದಲ್ಲಿ ನೀಡಲಾಗುವುದು. ಈ ಸಂಬಂಧ ಸರ್ಕಾರವು ಮಾರ್ಗಸೂಚಿ ರೂಪಿಸಿದೆ. ಸರ್ಕಾರದ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಆಕ್ಷೇಪಿಸಲಾದ ಆದೇಶ ಮಾಡಲಾಗಿದೆ” ಎಂದು ಸಮರ್ಥಿಸಿದರು.

ಈ ಮಧ್ಯೆ ಪೀಠವು “ಮಧ್ಯಂತರ ಆದೇಶ ತೆರವು ಮಾಡುವಂತೆ ಕೋರಿ ಏಕಸದಸ್ಯ ಪೀಠದ ಮುಂದೆ ಮೆಮೊ ಸಲ್ಲಿಸಬಹುದಲ್ಲವೇ?” ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ಏಕಸದಸ್ಯ ಪೀಠವು ಮಧ್ಯಂತರ ಪರಿಹಾರ ನೀಡಬಹುದಿತ್ತು. ಆದರೆ, ತಡೆಯಾಜ್ಞೆ ನೀಡಿದೆ. ಹೀಗಾಗಿ, ಮುಂದಿನ ನ್ಯಾಯಾಲಯಕ್ಕೆ ಹೋಗಬೇಕೆ ವಿನಾ ಅಲ್ಲಿಗೆ ಹೋಗಲಾಗದು” ಎಂದು ವಿವರಿಸಿದರು.

ರಿಟ್‌ನಲ್ಲಿ ಅರ್ಜಿದಾರರಾಗಿರುವ ಪುನಶ್ಚೇತನ ಸೇವಾ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ, ಅದಕ್ಕಾಗಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ” ಎಂದರು.

“ಗುಂಪೊಂದು ಮೈದಾನದಲ್ಲಿ ಕ್ರಿಕೆಟ್‌ ಆಡಬೇಕೆಂದರೆ ಸರ್ಕಾರದ ಬಳಿ ದಿನಂಪ್ರತಿ ಅನುಮತಿ ಪಡೆಯಬೇಕೆ? ಇದರಲ್ಲಿ ಸಕಾರಾತ್ಮಕವಾದ ವಿಚಾರವೇನಿದೆ? ಸಂವಿಧಾನದ 19(ಬಿ) ವಿಧಿಯಡಿ ಶಾಂತಿಯುತವಾಗಿ ಜೊತೆಗೂಡುವುದನ್ನು ನಿರ್ಬಂಧಿಸಲಾಗದು. ಹೀಗಾಗಿ, ಇದಕ್ಕಿಂತ ಸ್ವೇಚ್ಛೆಯ ಆದೇಶ ಇನ್ನೊಂದಿಲ್ಲ" ಎಂದರು.

“ಪ್ರತಿಯೊಂದು ಮೈದಾನ, ದಾರಿ ನಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ತನಗೆ ಇದೆ ಎಂದು ಹೇಳಲಾಗದು. ಉದ್ಯಾನಕ್ಕೆ ಹೋಗುವವರನ್ನು ನೀವು ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಅಕ್ರಮ ಕೂಟ ನಿರ್ಬಂಧಿಸಲು ಹಲವು ಅಪರಾಧಿಕ ಸೆಕ್ಷನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಸಕ್ಷಮ ಪ್ರಾಧಿಕಾರಗಳು ನಿರ್ಬಂಧ ವಿಧಿಸಲು ಕ್ರಮಕೈಗೊಳ್ಳಲಿವೆ. ಸಾರ್ವಜನಿಕ ಉದ್ಯಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಲಿದೆ. ಸಾರ್ವಜನಿಕ ದಾರಿಗಳನ್ನು ನಿರ್ಬಂಧಿಸುವ ವಿಚಾರವು ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ. ಇಲ್ಲಿ ಪೊಲೀಸ್‌ ಕಾಯಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳು ಬರುತ್ತವೆ. ಇಲ್ಲಿ ಸರ್ಕಾರಕ್ಕೆ ಯಾವುದೇ ಕೆಲಸ ಇಲ್ಲ. ಅದಾಗ್ಯೂ, ಸರ್ಕಾರ ಮೂಗು ತೂರಿಸಬೇಕು ಎಂದಾದರೆ ಅವರು ಕಾಯಿದೆ ರೂಪಿಸಬೇಕೆ ವಿನಾ ಕಾರ್ಯಕಾರಿ ಆದೇಶದ ಮೂಲಕ ಜನರ ಹಕ್ಕನ್ನು ಕಸಿಯಲಾಗದು” ಎಂದರು.

ಅಕ್ಟೋಬರ್‌ 28ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು “ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಗುಂಪು ಸೇರುವುದನ್ನು‌ ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶವು ಮೇಲ್ನೋಟಕ್ಕೆ ಸಂವಿಧಾನದ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ 19(1)(ಬಿ) (ಶಸ್ತ್ರಾಸ್ತ್ರರಹಿತವಾಗಿ, ಶಾಂತಿಯುತವಾಗಿ ಒಟ್ಟುಗೂಡುವ) ವಿಧಿ ಅಡಿಯಲ್ಲಿ ಸಾರ್ವಜನಿಕರಿಗೆ ದೊರೆತಿರುವ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ಸಂವಿಧಾನ ಪ್ರದತ್ತ ಹಕ್ಕನ್ನು ಕಾನೂನು ಜಾರಿಗೊಳಿಸುವ ಮೂಲಕ ಕಸಿದುಕೊಳ್ಳಬಹುದೇ ಹೊರತು ಸರ್ಕಾರಿ ಆದೇಶ ಹೊರಡಿಸುವ ಮೂಲಕವಲ್ಲ” ಎಂದು ಮಧ್ಯಂತರ ಆದೇಶ ಮಾಡಿತ್ತು.

“ಒಂದೊಮ್ಮೆ, ಸರ್ಕಾರದ ಆದೇಶವನ್ನು ಹೀಗೇ ಬಿಟ್ಟರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಕಾರ್ಯಗತಗೊಳಿಸಲು ಅನುಮತಿಸಲು ಸಾಧ್ಯವಿಲ್ಲ. ಅದಾಗ್ಯೂ, ಸರ್ಕಾರದ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಈ ಸಂಬಂಧ ಸೂಕ್ತ ಮಾಹಿತಿ ಪಡೆದು ತಿಳಿಸಲು ಕಾಲಾವಕಾಶ ಕೋರಿದ್ದಾರೆ. ಸರ್ಕಾರದ ಆದೇಶವು ಸಂವಿಧಾನದ 13(2)ನೇ ವಿಧಿಯನ್ನು (ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಸಂಕ್ಷೇಪಿಸುವ ಯಾವುದೇ ಕಾನೂನನ್ನು ರಾಜ್ಯ ರಚಿಸಬಾರದು) ಉಲ್ಲಂಘಿಸುವ ಹಿನ್ನೆಲೆಯಲ್ಲಿ, ಅಕ್ಟೋಬರ್ 18ರ ಸರ್ಕಾರದ ಆದೇಶ ಹಾಗೂ ಆ ನಂತರದ ಎಲ್ಲ ಆದೇಶಗಳಿಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಲಾಗಿದೆ.