Karnataka High Court
Karnataka High Court 
ಸುದ್ದಿಗಳು

ನೆಲವಾಗಿಲು ಗ್ರಾಮಸ್ಥರ ಪುನರ್ವಸತಿ: ಸ್ಥಳಾಂತರಕ್ಕೆ ಫಲಾನುಭವಿಗಳೆ ಅಡ್ಡಿ ಎಂದು ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Bar & Bench

ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮವನ್ನು ಅದೇ ಜಿಲ್ಲೆಯ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಫಲಾನುಭವಿಗಳೇ ಅಡ್ಡಿಪಡಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ನೆಲವಾಗಿಲು ಗ್ರಾಮದ ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ರೇಣುಕಾ ಹಾಗೂ ಮತ್ತಿರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್‌ನ ಹಿಂದಿನ ನಿರ್ದೇಶನದಂತೆ ನೆಲವಾಗಿಲು ಗ್ರಾಮದ ನಿವಾಸಿಗಳನ್ನು ಸ್ಥಳಾಂತರ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಚ್ ಸಿ ಶಿವಕುಮಾರ್ ಪೀಠಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಿದರು.

ನೆಲವಾಗಿಲು ಗ್ರಾಮದ ನಿವಾಸಿಗಳನ್ನು ಸ್ಥಳಾಂತರಿಸಲು ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ 34.14 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು 478 ನಿವೇಶನಗಳಿದ್ದು, 452 ನಿವೇಶನ ಹಂಚಿಕೆ ಮಾಡಲಾಗಿದೆ. ಅದರಲ್ಲಿ 18 ಮಂದಿ ನಿವೇಶನ ತಿರಸ್ಕರಿಸಿದ್ದಾರೆ. ಉಳಿದ 434 ನಿವೇಶನಗಳಲ್ಲಿ 52 ಫಲನಾನುಭವಿಗಳೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಸದ್ಯ ನಾಲ್ಕು ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸರ್ಕಾರವು 56 ಮನೆಗಳ ನಿರ್ಮಾಣ ಮಾಡಿದ್ದು, ಅದರಲ್ಲಿ 19 ಫಲಾನುಭವಿಗಳು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಉಳಿದಂತೆ 378 ಫಲಾನುಭವಿಗಳು ಸ್ಥಳಾಂತರಕ್ಕೆ ವಿವಿಧ ಷರತ್ತು ಹಾಗೂ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವವರೆಗೂ ಸ್ಥಳಾಂತರಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ. ಜತೆಗೆ, ಪ್ರತಿಭಟನೆ ನಡೆಸುತ್ತಾ ಮನೆಗಳ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದ್ದಾರೆ. ಅನೇಕ ಬಾರಿ ಸಂಧಾನ ನಡೆಸಿದ್ದರೂ, ಫಲಾನುಭವಿಗಳು ಒಪ್ಪುತ್ತಿಲ್ಲ. ಇದರಿಂದ ಸ್ಥಳಾಂತರ ಕಾರ್ಯ ಸ್ಥಗಿತಗೊಂಡಿದೆ. ಸರ್ಕಾರವೂ ಮನೆಗಳ ನಿರ್ಮಾಣಕ್ಕೆ ಸಿದ್ಧವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರ್ಕಾರದ ವರದಿಯನ್ನು ತೀವ್ರವಾಗಿ ಆಕ್ಷೇಪಿಸಿದ ಅರ್ಜಿದಾರ ಪರ ವಕೀಲ ಎನ್ ಪಿ ಅಮೃತೇಶ್ ಅವರು “ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ” ಎಂದರು. ಇದಕ್ಕೆ ವರದಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಅರ್ಜಿದಾರ ಪರ ವಕೀಲರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಮೂರು ವಾರ ಕಾಲ ಮುಂದೂಡಿತು.

ನೆಲವಾಗಿಲು ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಸಂಬಂಧ ರಾಜ್ಯ ಸರ್ಕಾರ 1993ರಲ್ಲಿ ಆದೇಶ ಹೊರಡಿಸಿತ್ತು. ಆದರೆ, ಈವರೆಗೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಾಟಿ ಬೀಸಿದ್ದ ಹೈಕೋರ್ಟ್, ಪ್ರಕರಣದ ಸಂಬಂಧ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.