Karnataka High Court 
ಸುದ್ದಿಗಳು

[ಗುತ್ತಿಗೆ ಅವಧಿ ವಿಸ್ತರಣೆಗೆ ನಕಾರ] ಕೊಳಗೇರಿ ನಿವಾಸಿಗಳ ಜೀವನ ಸ್ಥಿತಿಗತಿ ಸಮರೋಪಾದಿಯಲ್ಲಿ ಸುಧಾರಿಸಬೇಕು: ಹೈಕೋರ್ಟ್‌

ಗುತ್ತಿಗೆ ಪಡೆದ ಅರ್ಜಿದಾರ ಸಂಸ್ಥೆ 10 ವರ್ಷ ಕಳೆದರೂ, ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಮನೆಗಳನ್ನು ನಿರ್ಮಿಸುತ್ತಿರುವ ಕಂಪೆನಿ ಟೆಂಡರ್‌ ಅನ್ನು ಲಘುವಾಗಿ ಪರಿಗಣಿಸಬಾರದು ಎಂದಿರುವ ಹೈಕೋರ್ಟ್.

Bar & Bench

ಕೊಳಗೇರಿ ನಿವಾಸಿಗಳ ಜೀವನ ಸ್ಥಿತಿಗತಿಯನ್ನು ಸಮರೋಪಾದಿಯಲ್ಲಿ ಸುಧಾರಿಸಬೇಕಾಗಿದ್ದು, ಕೊಳಚೆ ಪ್ರದೇಶದ ಜನರ ಮನೆ ನಿರ್ಮಾಣ ಕಾಮಗಾರಿಯನ್ನು ಲಘುವಾಗಿ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಕೊಳಚೆ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಸಲುವಾಗಿ ನೀಡಿದ್ದ ಗುತ್ತಿಗೆ ಅವಧಿಯನ್ನು ಎರಡನೇ ಬಾರಿ ವಿಸ್ತರಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಬೆಂಗಳೂರಿನ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಕುರಿತಂತೆ ಗುತ್ತಿಗೆ ಪಡೆದಿದ್ದ ಐಶ್ವರ್ಯಗಿರಿ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ.

ಕೊಳಗೇರಿ ನಿವಾಸಿಗಳ ಜೀವನ ಸ್ಥಿತಿಯನ್ನು ಸಮರೋಪಾದಿಯಲ್ಲಿ ಸುಧಾರಿಸಬೇಕಿದೆ. ಅವರು ನೆಲೆಸಲು ಮನೆಗಳು ಅನಿವಾರ್ಯವಿದೆ. ಇದಕ್ಕಾಗಿಯೇ ಮಂಡಳಿಯು ಮನೆ ನಿರ್ಮಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ಗುತ್ತಿಗೆ ಪಡೆದ ಅರ್ಜಿದಾರ ಸಂಸ್ಥೆ 10 ವರ್ಷ ಕಳೆದರೂ ಮನೆಗಳ ಕಾಮಗಾರಿ ಪೂರ್ಣಗೊಳಿಸಿಲ್ಲ. ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ್ದರೂ ಪೂರ್ಣಗೊಳಿಸಿಲ್ಲ. ಈ ಮನೆಗಳನ್ನು ನಿರ್ಮಿಸುತ್ತಿರುವ ಕಂಪೆನಿ (ಅರ್ಜಿದಾರರು) ಟೆಂಡರ್‌ ಅನ್ನು ಲಘುವಾಗಿ ಪರಿಗಣಿಸಬಾರದು. ಆದ್ದರಿಂದ, ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ಗುತ್ತಿಗೆ ನೀಡಿರುವ ಕಾಮಗಾರಿಯ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಮೊದಲನೇ ಪ್ಯಾಕೇಜ್‌ನ 543 ಮನೆಗಳಲ್ಲಿ 197 ಪೂರ್ಣಗೊಂಡಿವೆ. 123 ಅಪೂರ್ಣವಾಗಿವೆ. 223 ಮನೆಗಳು ಇನ್ನೂ ಪ್ರಾರಂಭವಾಗಬೇಕಾಗಿದೆ. ಎರಡನೇ ಪ್ಯಾಕೇಜ್‌ನ 575 ಮನೆಗಳಲ್ಲಿ 508 ಮನೆ ಪ್ರಾರಂಭಿಸಿದ್ದು, 308 ಪೂರ್ಣಗೊಂಡಿವೆ. 194 ಅಪೂರ್ಣವಾಗಿವೆ. 73 ಮನೆಗಳನ್ನು ಪ್ರಾರಂಭಿಸಬೇಕಾಗಿದೆ. ಮೂರನೇ ಪ್ಯಾಕೇಜ್‌ನಲ್ಲಿ 9 ಕೊಳಚೆ ಪ್ರದೇಶದಲ್ಲಿ ಒಟ್ಟು 1,978 ಮನೆಗಳಲ್ಲಿ ನಿರ್ಮಾಣವಾಗಬೇಕಾಗಿದೆ. ಅವುಗಳಲ್ಲಿ 1,208 ಮನೆಗಳನ್ನು ಪ್ರಾರಂಭಿಸಿದ್ದು, 674 ಪೂರ್ಣಗೊಳಿಸಲಾಗಿದೆ. 505 ಅಪೂರ್ಣಗೊಂಡಿದೆ ಮತ್ತು 799ನ್ನೂ ಈವರೆಗೂ ಪ್ರಾರಂಭಿಸಿಲ್ಲ ಎಂಬ ಅಂಶ ಗೊತ್ತಾಗಲಿದೆ ಎಂದು ವಿವರಿಸಲಾಗಿದೆ.

ಇದೇ ಕಾಮಗಾರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಗುತ್ತಿಗೆ ಕರೆಯಲಾಗಿದ್ದು, ಕಾರ್ಯಾದೇಶ ನೀಡುವುದು ಬಾಕಿ ಇದೆ. ಈ ಅಂಶಗಳನ್ನು ಪರಿಗಣಿಸಿ ಗುತ್ತಿಗೆ ಅವಧಿ ವಿಸ್ತರಣೆ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2016-17ನೇ ಸಾಲಿನಲ್ಲಿ ರಾಜರಾಜೇಶ್ವರಿ ನಗರ ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಮೂರು ಕಾರ್ಯಾದೇಶಗಳ ಅನ್ವಯ ನಿಗದಿಪಡಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಿಲು ಕಾಲಾವಕಾಶ ವಿಸ್ತರಿಸಲು ಕೆಎಸ್‌ಡಿಬಿಗೆ ಮನವಿ ಮಾಡಲಾಗಿತ್ತು.

ಮೊದಲ ಪ್ಯಾಕೇಜ್‌ನಲ್ಲಿ ಏಳು ಕೊಳಗೇರಿಗಳಲ್ಲಿ 543 ನೆಲಮಹಡಿ ಘಟಕಗಳ ನಿರ್ಮಾಣವಾಗಿತ್ತು. ಎರಡನೇ ಪ್ಯಾಕೇಜ್‌ನಲ್ಲಿ 575 ನೆಲಮಹಡಿ ಘಟಕಗಳ ನಿರ್ಮಾಣಕ್ಕೆ ಮತ್ತು ಮೂರನೇ ಪ್ಯಾಕೇಜ್‌ನಲ್ಲಿ 860 ನೆಲಮಹಡಿ ಘಟಕಗಳ ನಿರ್ಮಾಣಕ್ಕಾಗಿ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಮನವಿಯನ್ನು 2018ರ ಮಾರ್ಚ್ 7ರಂದು ಕೆಎಸ್‌ಡಿಬಿ ಎರಡು ವರ್ಷಗಳ ಕಾಲ ವಿಸ್ತರಣೆ ಮಾಡಿತ್ತು. ಆದರೆ, ಮತ್ತೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ವಿಸ್ತರಣೆ ಮಾಡುವಂತೆ ಕೋರಲಾಗಿತ್ತು. ಇದನ್ನು ತಿರಸ್ಕರಿಸಿದ್ದ ಕೆಎಸ್‌ಡಿಬಿ 2021ರ ಜುಲೈ 27 ರಂದು ಗುತ್ತಿಗೆಯನ್ನು ಕೊನೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಕೆಎಸ್‌ಡಿಬಿಗೆ ಸೂಚನೆ ನೀಡಿತ್ತು. ಇದರಂತೆ ಅರ್ಜಿದಾರರ ಸಂಸ್ಥೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಕೆಎಸ್‌ಡಿಬಿ ತಿರಸ್ಕರಿಸಿದ ಕ್ರಮ ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.

Achievers Agri India Ltd and others Vs State of Karnataka.pdf
Preview