<div class="paragraphs"><p>Tushar Mehta, Delhi High Court</p></div>

Tushar Mehta, Delhi High Court

 
ಸುದ್ದಿಗಳು

ಮಧ್ಯಸ್ಥಿಕೆ ಪರಿಹಾರಕ್ಕಾಗಿ ರಿಲಯನ್ಸ್ ಉದ್ದಟತನದಿಂದ ಸರ್ಕಾರದ ತಲೆ ಮೇಲೆ ಕೂರಲಾಗದು: ದೆಹಲಿ ಹೈಕೋರ್ಟ್‌ಗೆ ಎಸ್‌ಜಿ

Bar & Bench

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ತನ್ನ ಪರವಾಗಿ ನೀಡಲಾಗಿರುವ ₹7,000 ಕೋಟಿ ಮಧ್ಯಸ್ಥಿಕೆ ಪರಿಹಾರ ಪಡೆಯುವ ವಿಚಾರದಲ್ಲಿ ಸರ್ಕಾರದ ತಲೆಯ ಮೇಲೆ ಉದ್ದಟತನದಿಂದ ಕುಳಿತುಕೊಳ್ಳಲಾಗದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬುಧವಾರ ದೆಹಲಿ ಹೈಕೋರ್ಟ್‌ ಮುಂದೆ ಹೇಳಿದರು [ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಮತ್ತು ದೆಹಲಿ ಮೆಟ್ರೋ ರೈಲು ನಿಗಮ ನಡುವಣ ಪ್ರಕರಣ].

ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಅಂಗಸಂಸ್ಥೆ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ (ಡಿಎಎಂಇಪಿಎಲ್) ಪರವಾಗಿ ದೊರೆತ ₹ 7,000 ಕೋಟಿಗಿಂತ ಹೆಚ್ಚಿನ ಮಧ್ಯಸ್ಥಿಕೆ ಪರಿಹಾರವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಆದೇಶದ ಜಾರಿಗಾಗಿ ದೆಹಲಿ ಮೆಟ್ರೋ ರೈಲು ಕಾರ್ಪೊರೇಶನ್ (ಡಿಎಂಆರ್‌ಸಿ) ವಿರುದ್ಧ ಡಿಎಎಂಇಪಿಎಲ್‌ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆಯ ನಡೆಸಿದ ನ್ಯಾ. ಸುರೇಶ್ ಕುಮಾರ್ ಕೈತ್‌ ಅವರ ಏಕಸದಸ್ಯ ಪೀಠದೆದುರು ಮೆಹ್ತಾ ವಾದ ಮಂಡಿಸಿದರು.

ಡಿಎಂಆರ್‌ಸಿ ಪರ ಹಾಜರಾದ ಮೆಹ್ತಾ ಅವರು ಮೂರನೇ ಪಾರ್ಟಿ ಖಾತೆಯಲ್ಲಿ (ಎಸ್ಕ್ರೋ ಅಕೌಂಟ್) ₹1,000 ಕೋಟಿ ಠೇವಣಿ ಇಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟ ದೆಹಲಿ ಮೆಟ್ರೋ ಬಳಿ ಹಣ ಇಲ್ಲ. ಆದ್ದರಿಂದ ಸರ್ಕಾರವು ಬ್ಯಾಂಕ್‌ಗಳೊಂದಿಗೆ ಮಾತುಕತೆಗೆ ತೊಡಗಲು ಮುಂದಾಗಿದೆ. ರಿಲಯನ್ಸ್‌ ಹೊಂದಿರುವ ಸಾಲ ಮತ್ತು ಋಣಭಾರವನ್ನು ಅದು ಸ್ವೀಕರಿಸುತ್ತದೆ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಎಂಇಪಿಎಲ್ ಪರ ವಾದ ಮಂಡಿಸಿದ ವಕೀಲ ಪ್ರತೀಕ್‌ ಸೆಕ್ಸಾರಿಯಾ ಸರ್ಕಾರದ ಈ ಪ್ರಸ್ತಾಪದ ಬಗ್ಗೆ ಸಾಲದಾತರೊಂದಿಗೆ (ಬ್ಯಾಂಕುಗಳು) ತಮ್ಮಕಕ್ಷೀದಾರರು ಮಾತನಾಡಿದ್ದು, ಅವರು ಇದಕ್ಕೆ ಒಪ್ಪಿಲ್ಲ ಎಂದು ತಿಳಿಸಿದರು.

ಹಾಗಾದರೆ, ಈ ಬಗ್ಗೆ ಡಿಎಎಂಇಪಿಎಲ್ ಅಫಿಡವಿಟ್‌ ಸಲ್ಲಿಸಬೇಕು ಎಂದು ಮೆಹ್ತಾ ತಿಳಿಸಿದರು. ಇದಕ್ಕೆ ಸೆಕ್ಸಾರಿಯಾ ಅವರು, ಇದು ಆದೇಶವನ್ನು ಜಾರಿಗೆ ತರಲು ಕೋರಿರುವ ಮನವಿಯಾಗಿದ್ದು (ಎಕ್ಸಿಕ್ಯೂಟಿವ್ ಪೆಟಿಷನ್) ಅಫಿಡವಿಟ್‌ ಸಲ್ಲಿಸುವ ಅಗತ್ಯವಿಲ್ಲ ಎಂದರು.

ಆಗ ಸಾಲಿಸಿಟರ್‌ ಜನರಲ್‌ “ನೀವು ನಮ್ಮ ತಲೆ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಕಕ್ಷೀದಾರರು ಉದ್ದಟತನದ ವರ್ತನೆ ತೋರಿದರೂ ಅವರು ತಮ್ಮ ಉದ್ದಟತನದಲ್ಲಿ ಮುಚ್ಚುಮರೆ ಹೊಂದಿರಬೇಕೇ ಹೋರತು ನ್ಯಾಯಾಲಯದೊಂದಿಗೆ ಅದನ್ನು ಹಂಚಿಕೊಳ್ಳಬಾರದು" ಎಂದರು. ಅಲ್ಲದೆ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಒಂದೊಮ್ಮೆ ಸರ್ಕಾರ ಬ್ಯಾಂಕುಗಳೊಂದಿಗೆ ವ್ಯವಹರಿಸುವುದನ್ನು ಡಿಎಎಂಇಪಿಎಲ್ ಬಯಸದಿದ್ದರೆ, ಆಗ ಬೇರೆ ಆಯ್ಕೆಯಿಲ್ಲ ಎಂದಿತು. ಅಲ್ಲದೆ ತನ್ನ ಬಳಿ ಇರುವ ಹಣದ ಮೊತ್ತವನ್ನು ಅರಿಯಲು ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸುವಂತೆ ಡಿಎಂಆರ್‌ಸಿಗೆ ಪೀಠ ನಿರ್ದೇಶಿಸಿತು. ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ 11ನೇ ಜನವರಿ 2022ಕ್ಕೆ ಪಟ್ಟಿ ಮಾಡಲಾಗಿದೆ.