Karnataka HC, COVID-19 
ಸುದ್ದಿಗಳು

ಕೋವಿಡ್‌ನಿಂದ ಸಾವನ್ನಪ್ಪಿದ ಸಾರಿಗೆ ನೌಕರರ ಕುಟುಂಬಕ್ಕೆ ಪರಿಹಾರ: ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಆರ್‌ಟಿಐ ಮಾಹಿತಿ ಪ್ರಕಾರ 2020ರ ಮಾರ್ಚ್‌ನಿಂದ 2021ರ ಜೂನ್‌ವರಗೆ ಕೋವಿಡ್‌ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 351 ನೌಕರರು ಮೃತಪಟ್ಟಿದ್ದಾರೆ. ಅದರಲ್ಲಿ ಕೇವಲ 11 ನೌಕರರ ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖ.

Bar & Bench

ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ಕುಟುಂಬ ಸದಸ್ಯರಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ಒದಗಿಸಲು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ತಾಹೀರ್ ಹುಸೈನ್ ಮತ್ತು ಅಜೀಜ್ ಪಾಷಾ ಜಾಗೀರದಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ನಿಗಮ (ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕೋವಿಡ್‌ನಿಂದ ಸಾರಿಗೆ ನೌಕರರು ಸಾವನ್ನಪ್ಪಿದ್ದರೆ, ಅವರ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಕಲ್ಪಿಸುವುದಾಗಿ ತಿಳಿಸಿ ಸಾರಿಗೆ ಇಲಾಖೆ 2021ರ ಫೆಬ್ರವರಿ 10ರಂದು ಸುತ್ತೋಲೆ ಹೊರಡಿಸಿತ್ತು. ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದ ಮಾಹಿತಿ ಪ್ರಕಾರ 2020ರ ಮಾರ್ಚ್‌ನಿಂದ 2021ರ ಜೂನ್‌ವರಗೆ ಕೋವಿಡ್‌ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ 351 ನೌಕರರು ಮೃತಪಟ್ಟಿದ್ದಾರೆ. ಅದರಲ್ಲಿ ಕೇವಲ 11 ನೌಕರರ ಕುಟುಂಬಗಳಿಗೆ ಪರಿಹಾರ ವಿತರಣೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ನಿಂದಾಗಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವಿವಿಧ ವಿಭಾಗಗಳಲ್ಲಿ 2020ರ ಮಾರ್ಚ್‌ನಿಂದ ಈವರೆಗೆ ಸಾವನ್ನಪ್ಪಿರುವ ನೌಕರರ ಮಾಹಿತಿ ಒದಗಿಸಬೇಕು. 2021ರ ಫೆಬ್ರವರಿ 10ರಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆ ಜಾರಿಗೊಳಿಸಬೇಕು. ಸಾರಿಗೆ ನಿಗಮಗಳ ನೌಕರರು ಕೋವಿಡ್‌ನಿಂದ ಮೃತಪಟ್ಟ ಪ್ರಕರಣಗಳ ಸಂಬಂಧ ಮೃತ ನೌಕರರ ಕುಟುಂಬ ಸದಸ್ಯರು ಅಥವಾ ಅವಲಂಬಿತರಿಗೆ ಯಾವುದೇ ವಿಳಂಬವಿಲ್ಲದೆ ಕೂಡಲೇ 30 ಲಕ್ಷ ರೂಪಾಯಿ ಪರಿಹಾರ ಪಾವತಿಸುವುದನ್ನು ಖಾತರಿಪಡಿಸಬೇಕು. ಸಾರಿಗೆ ನೌಕರರ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಗತ್ಯ ಹಣಕಾಸು ಬಿಡುಗಡೆ ಮಾಡಲು ಸರ್ಕಾರ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಲ್ಲದೆ, ಮೃತಪಟ್ಟ ನೌಕರರ ಅರ್ಹ ಅಲಂಬಿತರಿಗೆ ತಾತ್ಕಾಲಿಕ ಪರಿಹಾರವಾಗಿ ಕೂಡಲೇ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

2022ರ ಜನವರಿವರೆಗೆ ಬಿಎಂಟಿಸಿಯ 110 ನೌಕರರು ಸಾವನ್ನಪಿದ್ದರೆ, ಕೇವಲ ನಾಲ್ವರು ನೌಕರರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಕೆಎಸ್‌ಆರ್‌ಟಿಸಿಯ 97 ನೌಕರರು ಮೃತಪಟ್ಟಿದ್ದು, ಅದರಲ್ಲಿ 7 ನೌಕರರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಕೆಕೆಆರ್‌ಟಿಸಿಯ 62 ನೌಕರರು ಮೃತಪಟ್ಟಿದ್ದರೆ, ಯಾವೊಬ್ಬ ನೌಕರರ ಕುಟುಂಬಕ್ಕೂ ಪರಿಹಾರ ನೀಡಿಲ್ಲ. ವಾಯವ್ಯ ರಸ್ತೆ ಸಾರಿಗೆ 80 ನೌಕರರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ನೀಡಲು ಬೊಕ್ಕಸದಲ್ಲಿ ಹಣವಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.