Rahul Gandhi, Sonia Gandhi and ED 
ಸುದ್ದಿಗಳು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇ ಡಿ ದೂರು ವಜಾಗೊಳಿಸಿದ ದೆಹಲಿ ನ್ಯಾಯಾಲಯ; ಸೋನಿಯಾ, ರಾಹುಲ್ ನಿರಾಳ

ಖಾಸಗಿ ದೂರನ್ನಾಧರಿಸಿ ಪ್ರಕರಣ ದಾಖಲಾಗಿದ್ದು ಎಫ್ಐಆರ್ ಇಲ್ಲದೇ ಇರುವುದರಿಂದ ಪಿಎಂಎಲ್‌ಎ ಕಾಯಿದೆಯಡಿಇ ಡಿ ಸಲ್ಲಿಸಿರುವ ದೂರು ವಿಚಾರಣೆಗೆ ಅರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಹಣ ಅಕ್ರಮ ವರ್ಗಾವಣೆ ದೂರನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಪ್ರಕರಣ ದಾಖಲಾಗಿರುವುದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಎಫ್‌ಐಆರ್ ಆಧರಿಸಿ ಅಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರು ಸಮರ್ಥನೀಯವಲ್ಲ ಎಂದು ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಹೇಳಿದರು.

ಪ್ರಸ್ತುತ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ದೂರು ಎಫ್‌ಐಆರ್‌ ಆಧರಿಸಿರದೆ ಸಾರ್ವಜನಿಕ ವ್ಯಕ್ತಿಯಾದ ಡಾ. ಸುಬ್ರಮಣ್ಯನ್‌ ಸ್ವಾಮಿ ಅವರು ಸಿಆರ್‌ಪಿಸಿ ಸೆಕ್ಷನ್ 200ರ ಅಡಿಯಲ್ಲಿ ಸಲ್ಲಿಸಿದ ದೂರಿನಡಿ ಹೊರಡಿಸಲಾದ ಸಂಜ್ಞೇಯ ಹಾಗೂ ಸಮನ್ಸ್‌ ಆದೇಶ ಆಧಾರಿತವಾಗಿದೆ. ಪ್ರಸ್ತುತ ದೂರನ್ನು ಸಂಜ್ಞೇಯವಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ವಿವರಿಸಿದರು.

ಪಿಎಂಎಲ್‌ಎ ಕಾಯಿದೆಯಡಿ ಉಲ್ಲೇಖಿಸಲಾದ ಅನುಸೂಚಿತ ಕೃತ್ಯಕ್ಕೆ ಎಫ್‌ಐಆರ್ ಆಧರಿಸಿಯಷ್ಟೇ ಇ ಡಿ ಹಣ ವರ್ಗಾವಣೆ ಪ್ರಕರಣ ಹೂಡಬಹುದು ಎಂದು ಅದು ಒತ್ತಿ ಹೇಳಿದೆ.

ಪಿಎಂಎಲ್‌ಎ ಸೆಕ್ಷನ್ 3 ಅಡಿಯಲ್ಲಿ ವ್ಯಾಖ್ಯಾನಿಸಲಾದ ಹಾಗೂ ಸೆಕ್ಷನ್ 4 ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಹಣಕಾಸು ಅಕ್ರಮ ಅಪರಾಧಕ್ಕೆ ಸಂಬಂಧಿಸಿದ ತನಿಖೆ ಮತ್ತು ಅದರ ಆಧಾರದ ಮೇಲೆ ಸಲ್ಲಿಸಲಾದ ಅಭಿಯೋಗ ದೂರು ಕಾಯಿದೆಯ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಇಲ್ಲದಿದ್ದಲ್ಲಿ ಮಾನ್ಯವಾಗದು ಎಂದ ನ್ಯಾಯಾಧೀಶರು ಸೋನಿಯಾ ಮತ್ತು ರಾಹುಲ್‌ ವಿರುದ್ಧ ಇಡಿ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿತು.

ಪ್ರಕರಣದಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಈಗ ಎಫ್‌ಐಆರ್ ದಾಖಲಿಸಿರುವುದರಿಂದ, ಆರೋಪಗಳ ತಾತ್ತ್ವಿಕ ಅಂಶಗಳಿಗೆ ಸಂಬಂಧಿಸಿದಂತೆ ಇಡಿ ಮಾಡಿದ ವಾದಗಳನ್ನು ಈ ಹಂತದಲ್ಲಿ ನಿರ್ಣಯಿಸುವುದು ಅಕಾಲಿಕ ಹಾಗೂ ಅಸಮಂಜಸ ಎಂದು ನ್ಯಾಯಾಲಯ ಹೇಳಿತು.

ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು ಹಾಗೂ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿರುವುದರಿಂದ, ಮುಂದಿನ ಹಂತದಲ್ಲಿ ಇಡಿ ಬೇಕಾದರೆ ಹೆಚ್ಚುವರಿ ವಾದಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಸೇರಿಸಿ ಹೇಳಿತು.

ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು ಹಾಗೂ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇ ಡಿ ಹೇಳಿರುವುದರಿಂದ, ಮುಂದಿನ ಹಂತದಲ್ಲಿ ಇ ಡಿ ಬೇಕಾದರೆ ಹೆಚ್ಚುವರಿ ವಾದಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿತು.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. ಈಕ್ವಿಟಿ ವಹಿವಾಟಿನಲ್ಲಿ ₹2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಸೋನಿಯಾ, ರಾಹುಲ್ ಗಾಂಧಿ ಮಾತ್ರವಲ್ಲದೆ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು.