ಬಲವಂತದ ಧಾರ್ಮಿಕ ಮತಾಂತರ ಬಹಳ ಗಂಭೀರ ವಿಷಯವಾಗಿದ್ದು, ಇದು ದೇಶ ಮತ್ತು ನಾಗರಿಕರ ಸ್ವಾತಂತ್ರ್ಯ ಮತ್ತು ಭದ್ರತೆಯ ಜೊತೆಗೆ ಅವರ ಭಾವನಾತ್ಮಕ ಸ್ವಾತಂತ್ರ್ಯಕ್ಕೆ ಬೆದರಿಕೆಯೊಡ್ಡುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಬಲವಂತದ ಮತಾಂತರ ತುಂಬಾ ಅಪಾಯಕಾರಿಯಾಗಿದ್ದು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಇದ್ದರೂ ಬಲವಂತದ ಮತಾಂತರ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಹಿಮಾ ಕೋಹ್ಲಿ ಅವರಿದ್ದ ಪೀಠ ತಿಳಿಸಿತು.
ಹೀಗಾಗಿ ಒತ್ತಾಯದ ಮೂಲಕ ಮತಾಂತರ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ನವೆಂಬರ್ 28ಕ್ಕೆ ಮುಂದೂಡಿತು.
ವಂಚನೆ ಮತ್ತು ಬೆದರಿಕೆಯ ಮೂಲಕ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಠಿಣ ಕ್ರಮ ಕೋರಿ ಬಿಜೆಪಿ ವಕ್ತಾರ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿತು.
ಮೋಸದ ಮತ್ತು ದಿಕ್ಕುತಪ್ಪಿಸುವ ಧಾರ್ಮಿಕ ಮತಾಂತರವು ದೇಶಾದ್ಯಂತ ವ್ಯಾಪಕವಾಗಿದ್ದು ಅದು ಒಡ್ಡುತ್ತಿರುವ ಬೆದರಿಕೆಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಧಾರ್ಮಿಕ ಮತಾಂತರದಿಂದ ಮುಕ್ತವಾದ ಒಂದು ಜಿಲ್ಲೆಯೂ ಇಂದು ದೇಶದಲ್ಲಿ ಇಲ್ಲ. ಅಂತಹ ಮತಾಂತರಗಳನ್ನು ತಡೆಯದಿದ್ದರೆ, ಹಿಂದೂಗಳು ಶೀಘ್ರದಲ್ಲೇ ಭಾರತದಲ್ಲಿ ಅಲ್ಪಸಂಖ್ಯಾತರಾಗುತ್ತಾರೆ. ಹೀಗಾಗಿ ದೇಶಾದ್ಯಂತ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಬದ್ಧವಾಗಿರಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಅಲ್ಲದೆ ಮೋಸದ ಮತಾಂತರಕ್ಕೆ ಕಡಿವಾಣ ಹಾಕುವ ಸಂಬಂಧ ವರದಿ ಮತ್ತು ಮಸೂದೆ ಸಿದ್ಧಪಡಿಸಲು ಭಾರತೀಯ ಕಾನೂನು ಆಯೋಗಕ್ಕೆ ಸೂಚಿಸಬೇಕು ಎಂದು ಕೂಡ ಅರ್ಜಿದಾರರು ಕೋರಿದ್ದಾರೆ.