Supreme Court
Supreme Court 
ಸುದ್ದಿಗಳು

ಬಿಜೆಪಿಯ ನವೀನ್‌ ಕುಮಾರ್‌ ಜಿಂದಾಲ್‌ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್‌ಗೆ ವರ್ಗಾಯಿಸಿದ ಸುಪ್ರೀಂ

Bar & Bench

ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿವಾದದಲ್ಲಿ ಸಿಲುಕಿರುವ ಬಿಜೆಪಿ ಮಾಜಿ ವಕ್ತಾರ ನವೀನ್‌ ಕುಮಾರ್‌ ಜಿಂದಾಲ್‌ ವಿರುದ್ಧ ದೇಶದ ವಿವಿಧ ಕಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ದೆಹಲಿ ಪೊಲೀಸರಿಗೆ ವರ್ಗಾಯಿಸಿ ಆದೇಶ ಮಾಡಿದೆ.

ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಜಿಂದಾಲ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್‌ನ ಐಎಫ್‌ಎಸ್‌ಒ ಘಟಕಕ್ಕೆ ವರ್ಗಾಯಿಸಬೇಕು. ಆರೋಪಿಯ ವಿರುದ್ಧ ಮುಂದಿನ ಎಂಟು ವಾರಗಳವರೆಗೆ ಯಾವುದೇ ತೆರನಾದ ಆತುರದ ಕ್ರಮಕೈಗೊಳ್ಳಬಾರದು. ಇದರಿಂದ ಆರೋಪಿಯು ದೆಹಲಿ ಹೈಕೋರ್ಟ್‌ನಲ್ಲಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ನಾಬ್‌ ಗೋಸ್ವಾಮಿ ಪ್ರಕರಣದಲ್ಲಿ ನೀಡಲಾಗಿರುವ ಆದೇಶದ ರೀತಿಯಲ್ಲಿನ ಪರಿಹಾರ ನೀಡಬೇಕು ಎಂದು ಜಿಂದಾಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಗೀತಾ ಲೂಥ್ರಾ ಅವರು ಮನವಿ ಮಾಡಿದರು.

ಇದಕ್ಕೆ ನ್ಯಾಯಮೂರ್ತಿ ಶಾ ಅವರು “ಅದು ಭಿನ್ನ ಪ್ರಕರಣವಾಗಿದ್ದು, ಆರೋಪಿಯನ್ನು ರಕ್ಷಿಸಲು ನಾವಿಲ್ಲಿ ಕುಳಿತಿಲ್ಲ” ಎಂದರು.