ರಾಹುಲ್ ಗಾಂಧಿಗೆ ಜಾರ್ಖಂಡ್ ಹೈಕೋರ್ಟ್
ರಾಹುಲ್ ಗಾಂಧಿಗೆ ಜಾರ್ಖಂಡ್ ಹೈಕೋರ್ಟ್  ಫೇಸ್ ಬುಕ್
ಸುದ್ದಿಗಳು

ಶಾ ಅವಹೇಳನ ಆರೋಪ: ಮಾನನಷ್ಟ ಮೊಕದ್ದಮೆ ಪ್ರಶ್ನಿಸಿದ್ದ ರಾಹುಲ್ ಅರ್ಜಿ ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್

Bar & Bench

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದಿದ್ದ ತನ್ನ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.

ಬಿಜೆಪಿ ನಾಯಕರು ಅಧಿಕಾರದ ಅಮಲಿನಲ್ಲಿರುವ ಸುಳ್ಳುಗಾರರಾಗಿದ್ದು ಕೊಲೆ ಆರೋಪ ಹೊತ್ತ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರನ್ನಾಗಿ ಸ್ವೀಕರಿಸಿದ್ದಾರೆ ಎಂದು ರಾಹುಲ್ ಹೇಳಿದ್ದರು ಎಂಬ ಅಂಶವನ್ನು ನ್ಯಾ. ಅಂಬುಜ್ ನಾಥ್ ಗಮನಿಸಿದರು.

ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ಮೇಲ್ನೋಟಕ್ಕೆ ಐಪಿಸಿ ಸೆಕ್ಷನ್ 499ರ ಅಡಿ ಮಾನಹಾನಿಕರವಾಗಿವೆ ಎಂದು ನ್ಯಾಯಾಲಯ ಹೇಳಿದೆ.

"ಭಾರತೀಯ ಜನತಾ ಪಕ್ಷದ ನಾಯಕತ್ವ ಅಧಿಕಾರದ ಅಮಲಿನಲ್ಲಿದ್ದು ಸುಳ್ಳುಗಾರರಿಂದ ಕೂಡಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನುವುದನ್ನು ಈ ಹೇಳಿಕೆ ಮೇಲ್ನೋಟಕ್ಕೆ ಸೂಚಿಸುತ್ತದೆ. ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅಂತಹ ವ್ಯಕ್ತಿ / ವ್ಯಕ್ತಿಗಳನ್ನು ತಮ್ಮ ನಾಯಕರಾಗಿ ಸ್ವೀಕರಿಸುತ್ತಾರೆ ಎಂಬ ಅರ್ಥವನ್ನೂ ಇದು ಹೊರಡಿಸುತ್ತದೆ. ಈ ಆರೋಪ ಮೇಲ್ನೋಟಕ್ಕೆ ಮಾನಹಾನಿಕರವಾಗಿದೆ" ಎಂದ ನ್ಯಾಯಾಲಯ ರಾಹುಲ್ ಗಾಂಧಿಯವರ ಮನವಿ ತಿರಸ್ಕರಿಸಿತು.

ಬಿಜೆಪಿಯನ್ನು ಮಾರ್ಚ್ 18, 2018ರಂದು ಟೀಕಿಸಿ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ ಅವರು ಅಮಿತ್‌ ಶಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಹೇಳಿದ್ದರು ಎಂದು ಆರೋಪಿಸಿ ಬಿಜೆಪಿ ಮುಖಂಡ ನವೀನ್ ಝಾ ದೂರು ದಾಖಲಿಸಿದ್ದರು.

ಆರಂಭದಲ್ಲಿ, ರಾಂಚಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಝಾ ಅವರ ದೂರನ್ನು ವಜಾಗೊಳಿಸಿತ್ತು. ಹೀಗಾಗಿ ಅವರು ರಾಂಚಿಯ ನ್ಯಾಯಾಂಗ ಆಯುಕ್ತರ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ನ್ಯಾಯಾಂಗ ಆಯುಕ್ತರು ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಿಂತಿರುಗಿಸಿದ್ದರು.

ದಾಖಲೆಯಲ್ಲಿರುವ ಪುರಾವೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಹೊಸ ಆದೇಶ ಹೊರಡಿಸುವಂತೆ ನ್ಯಾಯಾಂಗ ಆಯುಕ್ತರು ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿದ್ದರು.

ಬಳಿಕ ಹೊಸ ಆದೇಶ ಹೊರಡಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ರಾಹುಲ್‌ ವಿರುದ್ಧ ಮೇಲ್ನೋಟದ ಪ್ರಕರಣ ಸಾಬೀತುಪಡಿಸುವಂತಹ ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್‌ ಹೈಕೋರ್ಟ್‌ ಕದ ತಟ್ಟಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Rahul Gandhi v State & Anr.pdf
Preview