ಬೆಂಗಳೂರು ನಗರದಲ್ಲಿ ಕಳೆದ ಮಾರ್ಚ್‌ನಿಂದ ಮೇ 25ರವರೆಗೆ ಅಳವಡಿಸಲಾಗಿದ್ದ ಒಟ್ಟು 35,137 ಅನಧಿಕೃತ ಜಾಹೀರಾತು ಫಲಕಗಳನ್ನು ಗುರುತಿಸಲಾಗಿದ್ದು, ಆ ಪೈಕಿ 34,541 ಅನ್ನು ತೆರವುಗೊಳಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೆ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂಚೆ ವಿಚಾರಣೆಗೆ ನಿಗದಿಯಾಗಿತ್ತು. ಕಾಲಾವಕಾಶದ ಕೊರತೆಯಿಂದ ಪೀಠವು ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ.
ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದ ಅನ್ವಯ ನಗರದಲ್ಲಿ ಜಾಹೀರಾತು ಅಳವಡಿಕೆಯನ್ನು ತಡೆಯುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಶ್ರೀಧರ್ ಮೂರ್ತಿ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
2023ರ ಮಾರ್ಚ್‌ನಿಂದ ಮೇ 25ರವರೆಗೆ ನಗರದ ಎಂಟು ವಲಯಗಳಲ್ಲಿ ಅಳವಡಿಸಲಾಗಿದ್ದ ಒಟ್ಟು 35,137 ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಇತರೆ ಜಾಹೀರಾತುಗಳನ್ನು ಗುರುತಿಸಲಾಗಿದೆ. ಆ ಪೈಕಿ 34,541 ಅನ್ನು ತೆರವುಗೊಳಿಸಲಾಗಿದೆ. ಅನಧಿಕೃತ ಜಾಹೀರಾತು ಅಳವಡಿಕೆ ಸಂಬಂಧ ಒಟ್ಟು 37 ದೂರುಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ 40 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ, ತೆರವುಗೊಳಿಸಲಾಗಿರುವ ಹೋರ್ಡಿಂಗ್ಸ್, ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ವಾರ್ಡ್ ಕಚೇರಿಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. ಜಾಹೀರಾತು ಫಲಕಗಳಿಗೆ ಬಳಕೆ ಮಾಡಲಾದ ಮರದ ಕಟ್ಟಿಗೆ ಹಾಗೂ ಇತರೆ ವಸ್ತುಗಳನ್ನು ಸುಡುವ ಮೂಲಕ ಸುಲಭವಾಗಿ ವಿಲೇವಾರಿ ಮಾಡಬಹುದು. ಆದರೆ, ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಜೊತಗೆ ಸಮಾಲೋಚನೆ ನಡೆಸಿ ಜಾಹೀರಾತುಗಳಿಗೆ ಬಳಸಿದ ಫ್ಲಾಸ್ಟಿಕ್ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು. ಅನಧಿಕೃತ ಜಾಹೀರಾತು ಅಳವಡಿಕೆ ಸಂಬಂಧ ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ವಾರ್ಡ್‌ವಾರು ಸಂಬಂಧಪಟ್ಟ ಅಧಿಕಾರಿ ಹೆಸರು ಹಾಗೂ ಫೋನ್ ನಂಬರ್ ಅನ್ನು ಪಾಲಿಕೆಯ ವೆಬ್‌ಸೈಟ್ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಅನುಪಾಲನವಾ ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾಹೀರಾತು ಹೋರ್ಡಿಂಗ್, ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಅಳವಡಿಸುವುದನ್ನು ಕೇಂದ್ರ ಚುನಾವಣಾ ಆಯೋಗವು ನಿಷೇಧ ಮಾಡಿದ ಹೊರತಾಗಿಯೂ ರಾಜಕೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಜಾಹೀರಾತು ಫಲಗಳನ್ನು ಅನಧಿಕೃತವಾಗಿ ಅಳವಡಿಕೆ ಮಾಡಿದ್ದಾರೆ. ಇದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಬಹುತೇಕ ಎಲ್ಲಾ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.