ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೂಷ್ ರಾವ್ ತನ್ನನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 11ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ.
ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೂಷ್ ರಾವ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರದೂಷ್ ಪರ ವಕೀಲ ಹಿತೇಶ್ ಗೌಡ ಬಿ ಜೆ ಅವರು “ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಆರೋಪದ ಹಿನ್ನೆಲೆಯಲ್ಲಿ ಪ್ರದೂಷ್‌ನನ್ನು ಬೆಳಗಾವಿಯ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ಇಡೀ ಪ್ರಕರಣದಲ್ಲಿ ಪ್ರದೂಷ್ ಪಾತ್ರ ಇಲ್ಲ. ಹೀಗಾಗಿ, ಅವರನ್ನು ಪರಪ್ಪನ ಅಗ್ರಹಾರದಲ್ಲೇ ಇಡಲು ಅವಕಾಶ ಮಾಡಿಕೊಡಬೇಕು” ಎಂದರು.
ಆಗ ಪೀಠವು “ದರ್ಶನ್ ಸ್ಥಳಾಂತರ (ಬಳ್ಳಾರಿ) ಮಾಡಿರುವುದನ್ನೂ ಪ್ರಶ್ನೆ ಮಾಡಲಾಗಿದೆಯೇ?” ಎಂದರು. ಇದಕ್ಕೆ ಹಿತೇಶ್ ಅವರು “ಪ್ರದೋಶ್ ಸ್ಥಳಾಂತರ ಮಾತ್ರ ಪ್ರಶ್ನೆ ಮಾಡಲಾಗಿದೆ” ಎಂದು. ಆಗ ಪೀಠವು “ನೀವು ಇಲ್ಲೇ (ಪರಪ್ಪನ ಅಗ್ರಹಾರ) ಇರಬೇಕಾ?” ಎಂದರು.
ಆಗ ಹಿತೇಶ್ ಅವರು “ಪ್ರದೂಷ್ ಇಲ್ಲೇ ಏಕೆ ಇರಬೇಕು ಎಂದು ನ್ಯಾಯಾಲಯಕ್ಕೆ ಸಮರ್ಥನೆ ನೀಡಲು ನಮ್ಮ ಬಳಿ ಸಾಕಷ್ಟು ವಿಚಾರಗಳು ಇವೆ. ನಮ್ಮನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ” ಎಂದರು
ಆಗ ಪೀಠವು “ದರ್ಶನ್ ಸಹ ವಾಪಸ್ ಬರಬೇಕಾ?” ಎಂದಿತು. ಇದಕ್ಕೆ ಹಿತೇಶ್ ಅವರು “ಇಲ್ಲ. ಇಡೀ ಪ್ರಕರಣದಲ್ಲಿ ಪ್ರದೂಶ್ ಪಾತ್ರ ಇಲ್ಲ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಿರುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರಲ್ಲಿ ಪ್ರದೂಷ್ ಪಾತ್ರ ಇಲ್ಲ” ಎಂದರು.
ಇದನ್ನು ಆಲಿಸಿದ ಪೀಠವು ಪ್ರಕರಣವನ್ನು ಸೆಪ್ಟೆಂಬರ್ 11ಕ್ಕೆ ವಿಚಾರಣೆಗೆ ನಿಗದಿಪಡಿಸುವಂತೆ ಆದೇಶಿಸಿತು.
ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿ 10 ಆರೋಪಿಗಳನ್ನು ಮೈಸೂರು, ವಿಜಯಪುರ, ಬಳ್ಳಾರಿ, ಕಲಬುರ್ಗಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲಾ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರದ ಮೇಲ್ವಿಚಾರಕರು ಸೇರಿ ಒಂಭತ್ತು ಅಧಿಕಾರಿಗಳನ್ನೂ ಅಮಾನತು ಮಾಡಲಾಗಿದ್ದು, ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.