Actor Darshan with his girlfriend Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ, ಅನುಕುಮಾರ್‌ ಜಾಮೀನು ಅರ್ಜಿ ವಜಾ ಮಾಡಿದ ಬೆಂಗಳೂರು ನ್ಯಾಯಾಲಯ

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ಮೊದಲನೇ ಆರೋಪಿ ಪವಿತ್ರಾ ಗೌಡ ಮತ್ತು ಏಳನೇ ಆರೋಪಿ ಅನುಕುಮಾರ್‌ ಅವರ ಜಾಮೀನು ಅರ್ಜಿಗಳನ್ನು ಬೆಂಗಳೂರಿನ ಸತ್ರ ನ್ಯಾಯಾಲಯವು ಶನಿವಾರ ತಿರಸ್ಕರಿಸಿದೆ.

ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಮತ್ತು ಅನುಕುಮಾರ್‌ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೈಶಂಕರ್‌ ಅವರು ಇಂದು ಪ್ರಕಟಿಸಿದ್ದಾರೆ. ವಿಸ್ತೃತವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಪವಿತ್ರಾ ಗೌಡ ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂಬುದು ಆಧಾರವಲ್ಲ. ಹೀನ ಅಪರಾಧ ಕೃತ್ಯ ಎಸಗಲಾಗಿದ್ದು, ರೇಣುಕಾಸ್ವಾಮಿಗೆ ಅನೂಹ್ಯವಾದ ರೀತಿಯಲ್ಲಿ ಚಿತ್ರ ಹಿಂಸೆ ನೀಡಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಪವಿತ್ರಾ ಇದ್ದರು ಎಂದು ಇಬ್ಬರು ಪ್ರತ್ಯಕ್ಷ ಸಾಕ್ಷಿ ನುಡಿದಿದ್ದಾರೆ. ಅಪರಾಧಕ್ಕೆ ಬಳಕೆ ಮಾಡಿದ್ದ ವಾಹನಕ್ಕೆ ಪವಿತ್ರಾ ಪ್ರವೇಶ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ” ಎಂದು ವಾದಿಸಿದ್ದರು.

ಅನುಕುಮಾರ್‌ ಜಾಮೀನಿಗೂ ವಿರೋಧಿಸಿದ್ದ ಪ್ರಾಸಿಕ್ಯೂಷನ್‌ “ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಇತರೆ ಆರೋಪಿಗಳ ಜೊತೆಗೂಡಿ ಕರೆತಂದಿದ್ದು, ಕೊಲೆಯ ತನಕ ಅನುಕುಮಾರ್ ಸ್ಥಳದಲ್ಲಿದ್ದರು. ಇಂದಿಗೂ ತನಿಖೆ ನಡೆಯುತ್ತಿದೆ. ಹೀನಾಯ ರೀತಿಯ ಕೊಲೆ ನಡೆಸಿರುವ ಇವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ವಾದಿಸಿತ್ತು.

ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸೆಬಾಸ್ಟಿಯನ್‌, ಅನುಕುಮಾರ್‌ ಪರ ಕೆ ರಾಮ್‌ ಸಿಂಗ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರ ಗೌಡ, ದರ್ಶನ್‌ ಅಲಿಯಾಸ್‌ ಡಿ ಬಾಸ್‌, ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌ ಅಲಿಯಾಸ್‌ ಜಗ್ಗ, ಅನುಕುಮಾರ್‌, ರವಿ ಶಂಕರ್‌ ಅಲಿಯಾಸ್‌ ರವಿ, ಧನರಾಜ್‌ ಡಿ ಅಲಿಯಾಸ್‌ ರಾಜು, ವಿನಯ್‌ ವಿ, ನಾಗರಾಜು, ಲಕ್ಷ್ಮಣ, ದೀಪಕ್‌, ಪ್ರದೂಷ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ, ನಿಖಿಲ್‌ ನಾಯಕ್‌ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್‌ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್‌ ಉದ್ದೇಶ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.