Darshan and Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರ ಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಜು.18ರವರೆಗೆ ವಿಸ್ತರಣೆ

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರ ಗೌಡ, ಎರಡನೇ ಆರೋಪಿ ನಟ ದರ್ಶನ್‌ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಿಸಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಗುರುವಾರ ಆದೇಶಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಮತ್ತು ತುಮಕೂರಿನ ಜಿಲ್ಲಾ ಕಾರಾಗೃಹದಲ್ಲಿರುವ ಆರೋಪಿಗಳನ್ನು 24ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಿಶ್ವನಾಥ್‌ ಸಿ. ಗೌಡರ್‌ ಅವರ ಮುಂದೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಯಿತು.

ಮಾಹಿತಿ ಪಡೆದುಕೊಂಡ ಮ್ಯಾಜಿಸ್ಟ್ರೇಟ್‌ ಅವರು ಎಲ್ಲಾ ಆರೋಪಿಗಳನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು.

“ಆರೋಪಿಗಳಿಂದ ಈವರೆಗೆ 83.65 ಲಕ್ಷ ರೂಪಾಯಿ ವಶ ಪಡಿಸಿಕೊಂಡಿದ್ದು, ಹಣದ ಮೂಲದ ಬಗ್ಗೆ ತನಿಖೆ ಮಾಡಬೇಕಿದೆ. ಕೆಲ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ. ಮೊಬೈಲ್‌ಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆಯಬೇಕಿದೆ. ಆರೋಪಿಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದು, ಪರಿಶೀಲನೆ ಮಾಡಬೇಕಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷಿಗಳ ಹೇಳಿಕೆಯನ್ನು ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ದಾಖಲಿಸಬೇಕಿದೆ. ಹೀಗಾಗಿ, ಜಾಮೀನು ಮಂಜೂರಾತಿಯನ್ನೂ ಪರಿಗಣಿಸಬಾರದು” ಎಂದು ರಿಮ್ಯಾಂಡ್‌ ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರ ಗೌಡ, ದರ್ಶನ್‌ ಅಲಿಯಾಸ್‌ ಡಿ ಬಾಸ್‌, ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌ ಅಲಿಯಾಸ್‌ ಜಗ್ಗ, ಅನುಕುಮಾರ್‌, ರವಿ ಶಂಕರ್‌ ಅಲಿಯಾಸ್‌ ರವಿ, ಧನರಾಜ್‌ ಡಿ ಅಲಿಯಾಸ್‌ ರಾಜು, ವಿನಯ್‌ ವಿ, ನಾಗರಾಜು, ಲಕ್ಷ್ಮಣ, ದೀಪಕ್‌, ಪ್ರದೂಷ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ, ನಿಖಿಲ್‌ ನಾಯಕ್‌ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್‌ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್‌ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.