Darshan Thoogudeepa and Pavithra Gowda  Image source: Instagram, Facebook
ಸುದ್ದಿಗಳು

ಮಾಫಿ ಸಾಕ್ಷಿಗಳನ್ನಾಗಿ ಪರಿಗಣಿಸಲು ನಟ ದರ್ಶನ್‌ ಸ್ನೇಹಿತರಾದ ವಿನಯ್‌, ಪ್ರದೋಷ್‌ರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

“ಕೊಲೆ ನಡೆದ ನಂತರ ದರ್ಶನ್‌ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗುಂಡು ಹಾರಿಸಿಕೊಂಡು ಸಾಯುವುದಾಗಿ ಬೆದರಿಸಿದರು. ಇದಕ್ಕೆ ಬೆದರಿ ನಾನು ದರ್ಶನ್‌ಗೆ ಸಹಾಯ ಮಾಡಿದೆ” ಎಂದು ಪ್ರದೋಷ್ ಹೇಳಿದ್ದಾನೆ.

Bar & Bench

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಆತನ ಇಬ್ಬರು ಆತ್ಮೀಯ ಸ್ನೇಹಿತರಾದ ಆರೋಪಿಗಳಾಗಿರುವ ವಿನಯ್‌ ವಿ ಮತ್ತು ಪ್ರದೋಷ್‌ ರಾವ್‌ ಅವರು ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಗಳನ್ನಾಗಿ ಪರಿಗಣಿಸುವಂತೆ ಕೋರಿ ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್‌ 307ರ ಅಡಿ ಅಪ್ರೂವರ್‌/ಮಾಫಿ ಸಾಕ್ಷಿಗಳನ್ನಾಗಿ ಪರಿಗಣಿಸಿ, ಕ್ಷಮೆ ನೀಡಿ ಬಿಡುಗಡೆ ಮಾಡುವಂತೆ ಕೋರಿ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕನಾದ 10ನೇ ಆರೋಪಿ ವಿನಯ್‌ ಮತ್ತು 14ನೇ ಆರೋಪಿ ಪ್ರದೋಷ್‌ ರಾವ್‌ ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ, ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳು ವಹಿಸಿದ ಪಾತ್ರವನ್ನು ಪ್ರದೋಷ್‌ ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಗುಂಡು ಹಾರಿಸಿಕೊಂಡು ಸಾಯುವುದಾಗಿ ದರ್ಶನ್‌ ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ, ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ ಪರ ನಾನು ಸಾಕ್ಷ್ಯ ನುಡಿಯುತ್ತೇನೆ ಎಂದು ಪ್ರದೋಷ್‌ ಅರ್ಜಿಯಲ್ಲಿ ಕೋರಿದ್ದಾನೆ.

ಈ ಅರ್ಜಿಗೆ ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು ಲಿಖಿತವಾಗಿಯೇ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ ಈ ಅರ್ಜಿಯನ್ನು ಪುರಸ್ಕರಿಸಬಾರದು.  ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು ಎಂದು ದರ್ಶನ್‌ ಹಾಗೂ ಇತರೆ ಆರೋಪಿಗಳು ನ್ಯಾಯಾಲಯವನ್ನು\ಬಲವಾಗಿ ಕೋರಿದ್ದಾರೆ. ಇದರಿಂದ  ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್‌ ಮತ್ತು ಪ್ರದೋಷ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇತರೆ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆಗಸ್ಟ್‌ 10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.

ಪ್ರದೋಷ್‌ ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್‌ ಜೊತೆಗಿನ ಸ್ನೇಹ, 2024ರ ಜೂನ್‌ 9ರಂದು ನಡೆದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ,  ರೇಣುಕಾಸ್ವಾಮಿ ಮೇಲೆ ದರ್ಶನ್‌ ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್ ತಿಳಿಸಿದ್ದಾನೆ.

ಇನ್ನೂ ‘ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದೆಯಷ್ಟೇ. ವಾಸ್ತವದಲ್ಲಿ ಕೊಲೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್‌ ತಡೆಯಲು ಪ್ರತ್ನಿಸಿದೆ. ದರ್ಶನ್‌ ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್‌ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗುಂಡು ಹಾರಿಸಿಕೊಂಡು ಸಾಯುವುದಾಗಿ ದರ್ಶನ್‌ ಬೆದರಿಸಿದರು. ಇದಕ್ಕೆ ಬೆದರಿ ನಾನು ದರ್ಶನ್‌ಗೆ ಸಹಾಯ ಮಾಡಿದೆ’ ಎಂದು ಹೇಳಿರುವ ಪ್ರದೋಷ್‌, ‘ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಪ್ರದೋಷ್‌ ಅರ್ಜಿಯಲ್ಲಿ ಕೋರಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್‌ ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್‌ ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಪಿ ಪ್ರಸನ್ನಕುಮಾರ್‌, ಅರ್ಜಿಯಲ್ಲಿ ವಿನಯ್‌ ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದ್ದಾರೆ.

ಈ ಮಧ್ಯೆ, ಪ್ರದೋಷ್‌ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್‌ ಹಾಗೂ ಇತರೆ ಆರೋಪಿಗಳು, ಅರ್ಜಿಯನ್ನು ಪರಿಗಣಿಸಬಾರದು. ಆತನ ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು, ಪ್ರದೋಷ್‌ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್‌ ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್‌ ಖಚಿತಪಡಿಸಬೇಕು. ಇತರೆ ಆರೋಪಿಗಳ ವಿರುದ್ಧವೇ ಪ್ರದೋಷ್‌ ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆಗಸ್ಟ್‌ 10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.