Actor Darshan 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸತ್ರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ಮಾಫಿ ಸಾಕ್ಷಿ ಪ್ರದೋಷ್‌

ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರಿಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿ ದರ್ಶನ್‌ ಮೊಮೊವನ್ನು ನ್ಯಾಯಾಲಯವು ತಿರಸ್ಕರಿಸಿತು.

Bar & Bench

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣವು ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್‌ ಸೋಮವಾರ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಕೋರ್ಟ್‌ಗೆ ಖುದ್ದು ಹಾಜರಾಗಿ ತನ್ನ ಸಾಕ್ಷ್ಯವನ್ನು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರು ಸೋಮವಾರ ಮುಂದುವರಿಸಿದರು.

ಕಾಮಾಕ್ಷಿಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಜೈಲಿನಿಂದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ ಅನ್ನು ನಗರ ಸಶಸ್ತ್ರ ಮೀಸಲು ಪಡೆ ಅಧಿಕಾರಿಗಳ ಮತ್ತು ಸಿಬ್ಬಂದಿಯ ಬೆಂಗಾವಲು ಹಾಗೂ ಭದ್ರತೆಯೊಂದಿಗೆ ಕರೆತಂದು ಸೋಮವಾರ ಬೆಳಗ್ಗೆ ಸುಮಾರು 11.10ರ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ವೇಳೆ ದರ್ಶನ್‌ ಪರ ವಕೀಲರು ಹಾಜರಾಗಿ, ಪ್ರದೋಷ್‌ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಈ ನ್ಯಾಯಾಲಯದ ಆದೇಶವನ್ನು ಸುಪ್ರಿಂ ಕೋರ್ಟ್‌ ಮುಂದೆ ಪ್ರಶ್ನಿಸಲಾಗುವುದು. ಅದಕ್ಕಾಗಿ ಎರಡು ದಿನಗಳ ಕಾಲ ಪ್ರದೋಷ್‌ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡುವಂತೆ ಕೋರಿ ಮತ್ತೆ ಮೊಮೊ ಸಲ್ಲಿಸಿದರು. ಆ ಮೂಲಕ ಪ್ರದೋಷ್‌ ಸಾಕ್ಷ್ಯ ದಾಖಲು ಪ್ರಕ್ರಿಯೆನ್ನು ತಡೆಯುವುದಕ್ಕೆ ಕೊನೆ ಪ್ರಯತ್ನ ನಡೆಸಿದರು.

ಆದರೆ, ಈ ಮನವಿಗೆ ತೀವ್ರವಾಗಿ ಆಕ್ಷೇಪಿಸಿದ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು ದರ್ಶನ್‌ ಮೊಮೊ ತಿರಸ್ಕರಿಸಲು ಕೋರಿದರು.

ಅದರಂತೆ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರಿಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿ ದರ್ಶನ್‌ ಮೊಮೊವನ್ನು ನ್ಯಾಯಾಲಯವು ತಿರಸ್ಕರಿಸಿತು.

ನಂತರ ಪ್ರಕರಣ ಸೂಕ್ಷ್ಮತೆಯಿಂದ ಮತ್ತು ಕೋರ್ಟ್‌ನಲ್ಲಿ ಜನಸಂದಣಿ ಕಡಿಮೆ ಮಾಡುವ ದೃಷ್ಟಿಯಿಂದ ಗೌಪ್ಯವಾಗಿ ನ್ಯಾಯಾಲಯವು ಪ್ರದೋಷ್‌ ಸಾಕ್ಷ್ಯವನ್ನು ದಾಖಲಿಸಿಕೊಂಡಿತು. ಕಟೆಕಟೆಯಲ್ಲಿ ನಿಂತು ಪ್ರಮಾಣ ಮಾಡಿ ಪ್ರದೋಷ್‌ ತನ್ನ ಸಾಕ್ಷ್ಯ ದಾಖಲಾತಿ ಆರಂಭಿಸಿದರು. ಸಂಜೆಯ ವೇಳೆಗೆ ಪ್ರದೋಷ್‌ ಸಾಕ್ಷ್ಯ ದಾಖಲು ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಹಾಗೆಯೇ, ಮಂಗಳವಾರವು ಪ್ರದೋಷ್‌ ಅನ್ನು ಖುದ್ದಾಗಿ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲಿಸ್‌ ಇನ್ಸ್‌ಪೆಕ್ಟರ್‌ ಮತ್ತು ಜೈಲು ಅಧಿಕಾರಿಗಳಿಗೆ ಸೂಚಿಸಿತು.

ಮತ್ತೊಂದೆಡೆ ಹೈಕೋರ್ಟ್‌ ನಿರ್ದೇಶನದಂತೆ ಸೋಮವಾರ ಪವಿತ್ರಾ ಗೌಡ ಮತ್ತು ದರ್ಶನ್‌ ಸೇರಿ ಪ್ರಕರಣದ ಒಟ್ಟು 6 ಆರೋಪಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಮಂಗಳವಾರ ಸಹ ಈ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಪಡಿಸಲು ನ್ಯಾಯಾಲಯ ನಿರ್ದೇಶಿಸಿದೆ.

ಸತ್ರ ನ್ಯಾಯಾಲಯದ ಆದೇಶದ ಬೆನ್ನಲ್ಲೇ ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಅವರು ಹೈಕೋರ್ಟ್‌ ಮುಂದೆ ಹಾಜರಾಗಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತದೆ. ಹೀಗಾಗಿ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಮೂರು ದಿನ ಕಾಲ ಪ್ರದೋಷ್ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡಲು ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು, ಪ್ರಕರಣವು ವಿಶೇಷ ಎಂದು ಏನೂ ಕಾಣುತ್ತಿಲ್ಲ ಎಂದು ತಿಳಿಸಿ ದರ್ಶನ್‌ ಪರ ವಕೀಲರ ಮನವಿ ತಿರಸ್ಕರಿಸಿದರು.