Actor Darshan with his girlfriend Pavitra Gowda 
ಸುದ್ದಿಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂಲಸೌಕರ್ಯ ಕೊರತೆ ಆರೋಪ: ಪವಿತ್ರಾ ಗೌಡ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಕಡಿಮೆ ಕೈದಿಗಳಿರುವ ಸೆಲ್‌ ನೀಡದಿರುವುದು, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ನ್ಯಾಯಾಂಗ ತಪಾಸಣೆಗೆ ಪವಿತ್ರಾ ಗೌಡ ಕೋರಿದ್ದರು.

Bar & Bench

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಕಡಿಮೆ ಕೈದಿಗಳಿರುವ ಸೆಲ್‌ ನೀಡದಿರುವ ಬಗ್ಗೆ ನ್ಯಾಯಾಂಗ ತಪಾಸಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಶುಕ್ರವಾರ ಆದೇಶ ಪ್ರಕಟಿಸಿದ್ದಾರೆ.

Sujata Madiwalappa Sambrani

ತಮ್ಮ ಕುಂದುಕೊರತೆಗಳ ಕುರಿತು ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ನ್ಯಾಯಾಧೀಶರು ಜೈಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪವಿತ್ರಾ ಗೌಡ ಮಾಹಿತಿ ನೀಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಜೈಲಿನಲ್ಲಿ ಕಡಿಮೆ ಕೈದಿಗಳಿರುವ ಸೆಲ್‌ ಒದಗಿಸುವಂತೆ ಹಾಗೂ ಅಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಸ್ನಾನದ ಕೋಣೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿ 2026ರ ಸೆಪ್ಟೆಂಬರ್‌ 7ರಂದು ನ್ಯಾಯಾಲಯ ಆದೇಶಿಸಿತ್ತು.

ಆದರೆ, ನ್ಯಾಯಾಲಯದ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸಿಲ್ಲ ಎಂದು ಆರೋಪಿಸಿದ್ದ ಪವಿತ್ರಾ ಗೌಡ, ಈ ಕುರಿತು ನ್ಯಾಯಾಂಗ ತಪಾಸಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಜೈಲು ದಾಖಲೆಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದೂ ಅವರು ಮನವಿ ಮಾಡಿದ್ದರು.

ಲಭ್ಯತೆ, ಕೈದಿಗಳ ವರ್ಗೀಕರಣ ಮತ್ತು ಭದ್ರತಾ ಅವಶ್ಯಕತೆಗಳನ್ನು ಪರಿಗಣಿಸಿ ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಜನದಟ್ಟಣೆಯಿರುವ ಸೆಲ್‌ ಒದಗಿಸಬೇಕು. ಆ ಸೆಲ್‌ನಲ್ಲಿ ಸಾಕಷ್ಟು ಕುಡಿಯುವ ನೀರು, ನೈರ್ಮಲ್ಯ, ಶೌಚಾಲಯ ಮತ್ತು ಸ್ನಾನದ ಕೋಣೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಇರುವುದನ್ನು ಜೈಲು ಅಧಿಕಾರಿಗಳು ಖಾತರಿಪಡಿಸಬೇಕು ಎಂದು ಸೆಪ್ಟೆಂಬರ್‌ 7ರ ಆದೇಶದಲ್ಲಿ ನ್ಯಾಯಾಲಯ ನಿರ್ದೇಶಿಸಿತ್ತು.

ಇದೇ ವೇಳೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿಗಳಾದ ಜಗದೀಶ್‌ ಮತ್ತು ಅನು ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್‌ ರಾವ್‌ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಅಕ್ಟೋಬರ್‌ 27ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಪ್ರದೋಷ್‌ ರಾವ್‌ಗೆ ಮಧ್ಯಂತರ ಜಾಮೀನು ನೀಡಬಾರದು ಎಂದು ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.