Darshan 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಜಾಮೀನು ಅರ್ಜಿ ಆದೇಶ ಅ.14ಕ್ಕೆ ಕಾಯ್ದಿರಿಸಿದ ನ್ಯಾಯಾಲಯ

ತಾಂತ್ರಿಕ ಸಾಕ್ಷ್ಯವನ್ನು ಸೃಷ್ಟಿಸಲಾಗಿದೆ ಎಂದು ಆಕ್ಷೇಪಿಸಿದ ಸಿ ವಿ ನಾಗೇಶ್‌.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್‌ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ತೀಕ್ಷ್ಣ ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯವು ಅಕ್ಟೋಬರ್‌ 14ಕ್ಕೆ ಆದೇಶ ಕಾಯ್ದಿರಿಸಿದೆ.

ನಟ ದರ್ಶನ್‌, ಎಂ ವಿನಯ್‌, ಪವನ್‌ ಅಲಿಯಾಸ್‌ ಪುಟ್ಟಸ್ವಾಮಿ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ್‌ ಅವರು ನಡೆಸಿದರು. ವಿನಯ್‌ ಮತ್ತು ಪವನ್‌ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ಅಕ್ಟೋಬರ್‌ 14ಕ್ಕೆ ಮುಂದೂಡಿದೆ.

ದರ್ಶನ್‌ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು ಪ್ರಬಲವಾಗಿ ವಾದ-ಪ್ರತಿವಾದ ಮಂಡಿಸುವ ಮೂಲಕ ಜಾಮೀನಿಗೆ ಪರ-ವಿರೋಧ ದಾಖಲಿಸಿದರು.

ದರ್ಶನ್‌ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ವಾದ

  • ದರ್ಶನ್‌ಗೆ ಜೂನ್‌ 5ರಂದು ರೇಣುಕಾಸ್ವಾಮಿ ಬಗ್ಗೆ ಗೊತ್ತಾಗಿರುವುದು. ಅಲ್ಲಿಯವರೆಗೆ ಆತ ಯಾರೂ ಎಂಬುದೇ ದರ್ಶನ್‌ಗೆ ಗೊತ್ತಿರಲಿಲ್ಲ. ಪವಿತ್ರಗೌಡ ಸಹಾಯಕ ಪವನ್‌ಗೆ ಈ ವಿಚಾರ ತಿಳಿಸಿದ್ದನು.

  • ದೇಶಾದ್ಯಂತ ದರ್ಶನ್‌ ಅಭಿಮಾನಿಗಳನ್ನು ಹೊಂದಿದ್ದಾರೆ. ದರ್ಶನ್‌ರಿಂದಾಗಿ 500 ಕುಟುಂಬಗಳು ಊಟ ಮಾಡುತ್ತಿವೆ. ದರ್ಶನ್‌ ಜೈಲಿನಲ್ಲಿ ಮುಂದುವರಿದರೆ ಆ ಕುಟುಂಬಗಳಿಗೆ ಹೊಡೆತ ಬೀಳುತ್ತದೆ.

  • ಜೂನ್‌ 11ರಂದು ಪಟ್ಟಣಗೆರೆ ಷೆಡ್‌ಗೆ ಪೊಲೀಸರನ್ನು ಕಾವಲಿಗೆ ಹಾಕಲಾಗಿದೆ. ಷೆಡ್‌ ಕದ ತೆಗೆದಿದ್ದು ಯಾರು? ಘಟನೆ ನಡೆದ ಸ್ಥಳದಲ್ಲಿನ ಮಣ್ಣನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಮಣ್ಣಿನಲ್ಲಿ ರಕ್ತದ ಮಾದರಿ ಪತ್ತೆಯಾಗಿಲ್ಲ. ರೇಣುಕಾಸ್ವಾಮಿಗೆ ಹಲ್ಲೆ ಮಾಡಲು ಬಳಕೆ ಮಾಡಿದ್ದ ಮರದ ಕೊಂಬೆಯನ್ನೂ ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲೂ ರಕ್ತದ ಕಲೆ ಕಂಡುಬಂದಿಲ್ಲ.

  • ಸರ್ಕಾರಿ ಅಧಿಕಾರಿಗ ಎದುರು ನಡೆಸಿರುವ ಪಂಚನಾಮೆಯಲ್ಲಿ ರಕ್ತದ ಮಾದರಿ ಸಿಕ್ಕಿದೆ ಎಂದು ಹೇಳಿದ್ದಾರೆ. ಇದು ತನಿಖೆ ನಡೆಸುವ ರೀತಿಯೇ? ಜೂನ್‌ 9ರಂದು ಮೃತದೇಹ ಪತ್ತೆಯಾಗಿದ್ದು, ಜೂನ್‌ 11ರಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹ ಊದಿಕೊಂಡಿತ್ತು. ವೃಷಣ ಊದಿಕೊಂಡಿದ್ದು, ಅಲ್ಲಿ ಯಾವುದೇ ಗಾಯ ಕಂಡುಬಂದಿರಲಿಲ್ಲ. ಪೊಲೀಸರ ವಾದಕ್ಕೂ ಮರಣೋತ್ತರ ವರದಿಗೂ ವ್ಯತ್ಯಾಸವಿದೆ. ಬಲ ತೊಡೆಯ ಕೆಳಗೆ ವೃಷಣ ಇರುತ್ತದೆಯೇ? ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ತೆಗೆದಿರುವ ಚಿತ್ರದಲ್ಲಿ ವೃಷಣದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ.

  • ದರ್ಶನ್‌ ಶೂನಲ್ಲಿ ಸಿಕ್ಕ ಮಣ್ಣಿನ ಪರೀಕ್ಷೆ ನಡೆದಿದೆ. ಶೂನಲ್ಲಿ ರಕ್ತದ ಮಾದರಿ ಸಿಕ್ಕಿದೆ ಎನ್ನುತ್ತಿದ್ದಾರೆ. ಮನೆಗೆ ತೆರಳಿ ತನಿಖಾಧಿಕಾರಿ ಶೂ ಆಯ್ಕೆ ಮಾಡಿಕೊಂಡಿದ್ದಾರೆ. ದರ್ಶನ್‌ ಶೂನಲ್ಲಿ ಯಾವ ದಿನ ರಕ್ತ ಅಂಟಿಕೊಂಡಿತ್ತು? ಈ ಪ್ರಶ್ನೆಗಳನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ. ಇದು ಅಸ್ವಾಭಾವಿಕವಾಗಿ ಕಾಣುತ್ತಿದ್ದು, ತಿರುಚಲಾಗಿದೆ ಎನಿಸುತ್ತಿದೆ. 

  • ಬೆಂಗಳೂರು ನಗರ ಪೊಲೀಸ್‌ ಆಯುಕ್ತರು, ವಿಶೇಷ ಸರ್ಕಾರಿ ಅಭಿಯೋಜಕರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಅಭಿಯೋಜಕರು ಮಾಹಿತಿ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

  • ತಾಂತ್ರಿಕ ಸಾಕ್ಷ್ಯವನ್ನು ಸೃಷ್ಟಿಸಲಾಗಿದೆ ಎಂದು ಆಕ್ಷೇಪ‌.

ಎಸ್‌ಪಿಪಿ ಪ್ರಸನ್ನಕುಮಾರ್‌ ವಾದಾಂಶಗಳು

  • ಐದು ನೂರು ಕುಟುಂಬಗಳು ದರ್ಶನ್‌ ಅವರು ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಲಾಗಿದೆ. ಆದರೆ, ಸಹರಾ ಸಮೂಹದ ಅಧ್ಯಕ್ಷ ಸುಬ್ರತೋ ರಾಯ್ ಪ್ರಕರಣದಲ್ಲಿ ಅವರು 20 ಸಾವಿರ ಮಂದಿಗೆ ಉದ್ಯೋಗಿ ಕಲ್ಪಿಸಿದ್ದರೂ ಜಾಮೀನು ಮಂಜೂರು ಮಾಡಿರಲಿಲ್ಲ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು.

  • ಆರೋಪಿಗಳ ನಡುವಿನ ಸಂಭಾಷಣೆಯ ಕರೆ ದಾಖಲೆ 10 ಸಾವಿರ ಪುಟಗಳಷ್ಟಿದೆ. ಅದರ ಸಾಫ್ಟ್‌ ಕಾಪಿ ಕೂಡ ಇದೆ. ಮೊದಲಿಗೆ ಸಾಕ್ಷಿ ಹೇಳಿಕೆ ನೀಡಿ ನ್ಯಾಯಾಲಯದಲ್ಲಿ ಉಲ್ಟಾ ಆಗುತ್ತಿದ್ದರು. ಈಗ ಲೊಕೇಷನ್‌ ಇರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿ ವಾದ ಮಂಡನೆ.