Actor Darshan with his girlfriend Pavitra Gowda 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಕೋರಿ ಬೆಂಗಳೂರಿನ ಸತ್ರ ನ್ಯಾಯಾಲಯದ ಕದತಟ್ಟಿದ ದರ್ಶನ್‌ ಗೆಳತಿ ಪವಿತ್ರಾ ಗೌಡ

ಒಟ್ಟು 17 ಆರೋಪಿಗಳ ಪೈಕಿ ಮೂವರು ಜಾಮೀನು ಕೋರಿದ್ದು, ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್‌ 27ಕ್ಕೆ ಮುಂದೂಡಿದೆ.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಹಾಗೂ ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಸೇರಿ ಮೂವರು ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ, 7ನೇ ಆರೋಪಿ ಅನುಕುಮಾರ್‌, 10ನೇ ಆರೋಪಿ ವಿ ವಿನಯ್‌ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 56ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಜಯಶಂಕರ್‌ ವಿಚಾರಣೆ ನಡೆಸಿದರು.

ಈಗಾಗಲೇ ಪವಿತ್ರಾ ಗೌಡ ಮತ್ತು ವಿನಯ್‌ ಜಾಮೀನು ಕೋರಿದ್ದರು. ಈ ಸಂಬಂಧ ನೋಟಿಸ್‌ ಜಾರಿಯಾಗಿದ್ದರಿಂದ ಕಾಮಾಕ್ಷಿ ಪಾಳ್ಯ ಪೊಲೀಸರನ್ನು ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಆಕ್ಷೇಪಣೆ ಸಲ್ಲಿಸಿದರು. ಅನುಕುಮಾರ್‌ ಅಲಿಯಾಸ್‌ ಅನು ಜಾಮೀನು ಕೋರಿಕೆ ಅರ್ಜಿಯು ಇಂದು ವಿಚಾರಣೆ ಬಂದಿರುವುದರಿಂದ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಆಗಸ್ಟ್‌ 27ಕ್ಕೆ ವಿಚಾರಣೆಗೆ ಮುಂದೂಡಿದೆ.

ಆರೋಪಿಗಳಾದ ಪವಿತ್ರಾ ಗೌಡ, ವಿನಯ್‌ ಮತ್ತು ಅನುಕುಮಾರ್‌ ಪರವಾಗಿ ಕ್ರಮವಾಗಿ ವಕೀಲರಾದ ರೇನಿ ಸೆಬಾಸ್ಟಿಯನ್‌, ಕೆ ನಟರಾಜ್‌ ಮತ್ತು ರಾಮ್‌ ಸಿಂಗ್‌ ಕೆ ವಕಾಲತ್ತು ಹಾಕಿದ್ದಾರೆ.

ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರಾ ಗೌಡ, ದರ್ಶನ್‌ ಅಲಿಯಾಸ್‌ ಡಿ ಬಾಸ್‌, ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌ ಅಲಿಯಾಸ್‌ ಜಗ್ಗ, ಅನುಕುಮಾರ್‌, ರವಿ ಶಂಕರ್‌ ಅಲಿಯಾಸ್‌ ರವಿ, ಧನರಾಜ್‌ ಡಿ ಅಲಿಯಾಸ್‌ ರಾಜು, ವಿನಯ್‌ ವಿ, ನಾಗರಾಜು, ಲಕ್ಷ್ಮಣ, ದೀಪಕ್‌, ಪ್ರದೂಷ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ, ನಿಖಿಲ್‌ ನಾಯಕ್‌ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್‌ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್‌ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.