ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್‌ನನ್ನು ವಿಶೇಷ ಸೌಲಭ್ಯ ಪಡೆದ ಪ್ರಕರಣದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಅನುಮತಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ವಜಾ ಮಾಡಿದೆ.
ವಿಶೇಷ ಸೌಲಭ್ಯ ಪಡೆದ ಪ್ರಕರಣದಲ್ಲಿ ತನ್ನ ಯಾವುದೇ ತಪ್ಪಿಲ್ಲದಿದ್ದರೂ ಬೆಳಗಾವಿಯ ಹಿಂಡಲಗಾ ಜೈಲಿನ ಅಂಧೇರಿ ಸೆಲ್‌ಗೆ ವರ್ಗಾಯಿಸಿರುವುದಕ್ಕೆ ಪ್ರಶ್ನಿಸಿ ಪ್ರದೋಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಪ್ರದೋಷ್‌ನನ್ನು ಬೆಳಗಾವಿಯ ಹಿಂಡಲಗಾ ಜೈಲಿನ ಅಂಧೇರಿ ಸೆಲ್‌ನಲ್ಲಿ ಇಟ್ಟಿದ್ದನ್ನು ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಸಮರ್ಥಿಸಿದ್ದಾರೆ. ಅರ್ಜಿದಾರ ಪ್ರದೋಷ್ ಇನ್ನೂ ವಿಚಾರಣಾಧೀನ ಕೈದಿಯಾಗಿದ್ದು, ವಿಶಿಷ್ಟ ಪರಿಸ್ಥಿತಿ ನಿರ್ಮಾಣವಾಗದ ಹೊರತು ಅವರನ್ನು ಅಂಧೇರಿ ಸೆಲ್‌ನಲ್ಲಿ ಇಟ್ಟಿರುವುದು ಕಾನೂನಿಗೆ ವಿರುದ್ಧ. ಪ್ರಾಸಿಕ್ಯೂಷನ್ ತನ್ನ ಮನಸ್ಸಿಗೆ ಬಂದಹಾಗೆ ವಿಚಾರಣಾಧೀನ ಕೈದಿಗಳನ್ನು ವರ್ಗಾಯಿಸುವಂತಿಲ್ಲ. ಇಂಥ ಆದೇಶ ಕೋರಿ ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಬಂದಾಗ ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಬೇಕು” ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.
“ವಿಶೇಷ ಆತಿಥ್ಯ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಮ್ಮೆ ಆರೋಪಿ ವರ್ಗಾವಣೆ ಮಾಡಬೇಕಿಂದಿದ್ದರೆ ಅದು ದರ್ಶನ್ ಮಾತ್ರ. ದರ್ಶನ್ ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್ ನಾಗನ ಜೊತೆ ಆರಾಮವಾಗಿ ಕುಳಿತು ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಿದ್ದರು. ಆದರೆ, ದರ್ಶನ್ ನಡೆಸಿರುವ ಕೃತ್ಯಕ್ಕಾಗಿ ಪ್ರದೋಷ್‌ನನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ವ್ಯಾಪ್ತಿ ಹೊಂದಿರುವ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯನ್ನು ಇಟ್ಟ ಬಳಿಕ ಸಕಾರಣವಿಲ್ಲದೇ ವರ್ಗಾಯಿಸಲಾಗದು. ಅಂಥ ವರ್ಗಾವಣೆಗೆ ವಿವೇಚನಯುಕ್ತ ಆದೇಶ ಇರಬೇಕು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವಾದ ಆಲಿಸದೇ, ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೇ ಆಕ್ಷೇಪಾರ್ಹವಾದ ಆದೇಶ ಮಾಡಲಾಗಿದೆ. ವಿವೇಚನೆ ಬಳಸದೇ ಮ್ಯಾಜಿಸ್ಟ್ರೇಟ್ ಮಾಡಿರುವ ಆಗಸ್ಟ್ 27ರ ಆದೇಶ ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ತಕ್ಷಣ ಪ್ರದೋಷ್‌ನನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಆದೇಶಿಸಿತ್ತು.
ಪ್ರಕರಣದ ಹಿನ್ನೆಲೆ: ನಟ ದರ್ಶನ್, ಆರೋಪಿಗಳಾದ ನಾಗರಾಜು, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗಾ ಮತ್ತಿತರರು ಪರಪ್ಪನ ಅಗ್ರಹಾರದ ಕಾರಾಗೃಹದ ಹುಲ್ಲು ಹಾಸಿನಲ್ಲಿ ವಿರಾಜಮಾನವಾಗಿ ಸಿಗರೇಟು ಸೇದುತ್ತಾ, ಟೀ ಹೀರುತ್ತಾ ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಾಸಿಕ್ಯೂಷನ್ ದರ್ಶನ್, ಪ್ರದೋಷ್ ಸೇರಿ ಒಂಭತ್ತು ಆರೋಪಿಗಳನ್ನು ರಾಜ್ಯದ ವಿವಿಧ ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸುವ ಸಂಬಂಧ ಆಗಸ್ಟ್ 27ರಂದು ಮ್ಯಾಜಿಸ್ಟ್ರೇಟ್ ಅವರಿಂದ ಆದೇಶ ಮಾಡಿಸಿಕೊಂಡಿತ್ತು.
ಅದರ ಭಾಗವಾಗಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ, ಪ್ರದೋಷ್‌ನನ್ನು ಬೆಳಗಾವಿ ಜೈಲಿಗೆ, ಮೈಸೂರಿನ ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳಾದ ಪವನ್, ರಾಘವೇಂದ್ರ ನಂದೀಶ್, ಶಿವಮೊಗ್ಗಕ್ಕೆ ಜಗದೀಶ್ ಮತ್ತು ಲಕ್ಷ್ಮಣ, ಧಾರವಾಡಕ್ಕೆ ಧನರಾಜ್, ವಿಜಯಪುರಕ್ಕೆ ವಿನಯ್, ಕಲಬುರ್ಗಿಗೆ ನಾಗರಾಜ್‌ಗೆ ಸ್ಥಳಾಂತರಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು.
ಅರ್ಜಿದಾರರ ಪರವಾಗಿ ವಕೀಲರಾದ ಬಿ ಜೆ ಹಿತೇಶ್ ಗೌಡ, ಡಿ ಆದಿತ್ಯ ಮತ್ತು ವಿ ಸಂತೋಷ್ ವಾದಿಸಿದ್ದರು.