Darshan & Vijayalakshmi 
ಸುದ್ದಿಗಳು

ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್‌ ಮಾಫಿ ಸಾಕ್ಷಿ: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ನಿಯಮಗಳ ಪ್ರಕಾರ ಪ್ರಕರಣದ ಯಾವುದೇ ಹಂತದಲ್ಲಾದರೂ ಆರೋಪಿಯು ಮಾಫಿ ಸಾಕ್ಷಿಯಾಗಿ ಕೋರಲು ಅವಕಾಶವಿದೆ. ಅದನ್ನು ಪ್ರಶ್ನಿಸುವ/ ವಿರೋಧಿಸುವ ಹಕ್ಕು ಸಹ ಆರೋಪಿಗೆ ಇಲ್ಲ ಎಂದಿರುವ ಹೈಕೋರ್ಟ್.‌

Bar & Bench

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ರಾವ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ.

ವಿಚಾರಣಾ ನ್ಯಾಯಾಲಯವು 2026ರ ಸೆಪ್ಟೆಂಬರ್‌ 16ರಂದು ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಪ್ರಶ್ನಿಸಿ ದರ್ಶನ್‌ ಪರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಪೀಠ ಬುಧವಾರ ತೀರ್ಪು ನೀಡಿದೆ.

Justice V Srishananda

ಇದರೊಂದಿಗೆ ಪ್ರದೋಷ್‌ ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿರುವ ವಿಚಾರದಲ್ಲಿ ದರ್ಶನ್‌ ಮತ್ತೆ ಹಿನ್ನಡೆಯಾಗಿದೆ.

ಪ್ರದೋಷ್‌ 2026ರ ಜುಲೈ 27ರಿಂದಲೂ ಬಿಡುಗಡೆಯಾದ ವಿಚಾರಣಾ ಕೈದಿಯೊಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ ಮೊಬೈಲ್‌ ಸಂಖ್ಯೆಯನ್ನು ವಕೀಲ ಸಂತೋಷ್ ಎಂಬ ಹೆಸರು ನಮೂದಿಸಿಕೊಂಡು ತನ್ನ ಹೆಂಡತಿಯೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದರು. ಅಲ್ಲದೆ, ಹೆಂಡತಿಯ ಮೂಲಕ ಇತರರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಪತ್ನಿಯೂ ಹೊರಗಿನವೊಂದಿಗೆ ಮಾತನಾಡಿದ್ದಾರೆ. ಇದಾದ ನಂತರ ಆತನ ಮನಸ್ಥಿತಿ ಬದಲಾಗಿದೆ. ಬೇರೆಯವರ ಚಿತಾವಣೆ, ಪ್ರಭಾವಕ್ಕೆ ಒಳಗಾಗಿ ಮತ್ತು  ದುರುದ್ದೇಶದಿಂದ 2026ರ ಆಗಸ್ಟ್‌ 8ರಂದು ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ, ಆರೋಪಟ್ಟಿ ಸಲ್ಲಿಕೆಯಾಗುವ ಮುನ್ನ ಮಾಫಿ ಸಾಕ್ಷಿಯಾಗಲು ಬಯಸಿಲ್ಲ. ಪ್ರದೋಷ್‌ ಮೊಬೈಲ್‌ ಸಂಖ್ಯೆ ದುರ್ಬಳಕೆ ಪ್ರಕರಣ ತನಿಖೆ ಪೂರ್ಣಗೊಳ್ಳುವರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ತಡೆಹಿಡಿಯಬೇಕೆಂಬ ಮನವಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ ಎಂಬ ದರ್ಶನ್‌ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ನಿಯಮಗಳ ಪ್ರಕಾರ ಪ್ರಕರಣದ ಯಾವುದೇ ಹಂತದಲ್ಲಾದರೂ ಆರೋಪಿಯು ಮಾಫಿ ಸಾಕ್ಷಿಯಾಗಿ ಕೋರಲು ಅವಕಾಶವಿದೆ. ಅದನ್ನು ಪ್ರಶ್ನಿಸುವ/ ವಿರೋಧಿಸುವ ಹಕ್ಕು ಸಹ ಆರೋಪಿಗೆ ಇಲ್ಲ. ಪ್ರದೋಷ್‌ ಜೈಲಿನಿಂದ ಪ್ರತ್ನಿಯೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದ. ಆ ಕುರಿತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಹೇಳಲಾಗದು. ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರಿದ ಮರು ದಿನವೇ ಅದಕ್ಕೆ ಪ್ರಾಸಿಕ್ಯೂಷನ್‌ ಒಪ್ಪಿಗೆ ನೀಡಿರುವುದಲ್ಲಿ ತಪ್ಪು ಹುಡುಕಲಾಗದು. ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರಾಸಿಕ್ಯೂಷನ್‌ ವಾದವನ್ನು ವಿಚಾರಣಾ ನ್ಯಾಯಾಲಯ ಆಲಿಸಿದೆ. ಈ ಎಲ್ಲಾ ಕಾರಣಗಳಿಂದ ವಿಚಾರಣಾ ನ್ಯಾಯಾಲಯ ಆದೇಶವು ಸೂಕ್ತವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.

ಇನ್ನೂ ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಪ್ರದೋಷ್‌ ಪ್ರಶ್ನಿಸುವ ಹಕ್ಕು ದರ್ಶನ್‌ಗೆ ಇದೆ. ಆ ವೇಳೆ ದರ್ಶನ್‌ ತಮಗೆ ಅನಿಸಿದ ಎಲ್ಲಾ ಪ್ರಶ್ನೆಗಳನ್ನು ಕೇಳಲು ಮುಕ್ತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ ಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ತನಿಖೆ ಅಥವಾ ಟ್ರಯಲ್‌ ಯಾವುದೇ ಹಂತದಲ್ಲಾದರೂ, ಪ್ರಾಸಿಕ್ಯೂಷನ್‌ ಮೂಲಕ ಇಲ್ಲವೇ ಕೋರ್ಟ್‌ಗೆ ನೇರವಾಗಿ ಅರ್ಜಿ ಸಲ್ಲಿಸಿ ಆರೋಪಿ ಮಾಫಿ ಸಾಕ್ಷಿಯಾಗಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಮಾಫಿ ಸಾಕ್ಷಿಯಾಗಲು ಪ್ರದೋಷ್‌ ಕೈಗೊಂಡ ನಿರ್ಧಾರ, ಅದರ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನು ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಪ್ರಶ್ನಿಸುವ ಸಂಪೂರ್ಣ ಹಕ್ಕು ದರ್ಶನ್‌ಗೆ ಇದ್ದೇ ಇದೆ. ಪ್ರದೋಷ್‌ ಪಾಟಿ ಸವಾಲು ಪ್ರಕ್ರಿಯೆ ವೇಳೆ ವಿಚಾರಣೆಗೆ ಖುದ್ದು ಹಾಜರಾಗಲು ದರ್ಶನ್‌ಗೆ ಪೀಠ ಈಗಾಗಲೇ ಅನುಮತಿ ಸಹ ನೀಡಿದೆ. ಇನ್ನೂ ಪ್ರದೋಷ್ ವಕೀಲ ಸಂತೋಷ್‌ ಹೆಸರು ನಮೂದಿಸಿಕೊಂಡು ಪತ್ನಿಯೊಂದಿಗೆ ಮಾತನಾಡಿದ್ದಾನೆ ಅಷ್ಟೇ. ಪ್ರಕರಣದ ವರದಿಯಲ್ಲಿ ಏನೋ ಸೀಕ್ರೇಟ್ ಮಾತನಾಡಿದ್ದಾನೆಂದು ಎಂದೇನಿಲ್ಲ ಎಂಬುದಾಗಿ ವಿಚಾರಣೆ ವೇಳೆ ಪೀಠ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.