Renukaswamy 
ಸುದ್ದಿಗಳು

[ರೇಣುಕಾಸ್ವಾಮಿ ಕೊಲೆ] ರತ್ನಪ್ರಭಾ ಪಾಟಿ ಸವಾಲಿಗೆ ಒಳಪಡಿಸಲು ಅನುಮತಿ ನಿರಾಕರಿಸಿದ ಹೈಕೋರ್ಟ್‌

ಮಿನಲ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಯೂ ಆಗಿರುವ ಮೃತರ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಈ ಕುರಿತ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.

Justice M Nagaprasanna

“ಸಾಕ್ಷಿಯನ್ನು ಕಟಕಟೆಗೆ ಕರೆದ ಪಕ್ಷವು ತನ್ನ ತೃಪ್ತಿಗೆ ತಕ್ಕಂತೆ ಮೊದಲ ಹಂತದ ವಿಚಾರಣೆ ನಡೆಯಲಿಲ್ಲ ಎಂಬ ಕಾರಣಕ್ಕಾಗಿ; ಸಾಕ್ಷ್ಯ ಕಾಯಿದೆಯ ಸೆಕ್ಷನ್ 154ರ ಅಡಿಯಲ್ಲಿನ ಪ್ರಕ್ರಿಯೆ ಬಳಸಿಕೊಂಡು ಮತ್ತೊಂದು ಸುತ್ತಿನ ಎರಡನೇ ಇನ್ನಿಂಗ್ಸ್‌ ವಿಚಾರಣೆಗೆ ಕೋರಲು ಸಾಧ್ಯವಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

“ತನ್ನ ಮೂಗಿನ ನೇರಕ್ಕೆ ಸಾಕ್ಷಿಯ ಹೇಳಿಕೆಯನ್ನು ಪಡೆಯುವಂತೆ ಮಾಡುವ ಪ್ರಾಸಿಕ್ಯೂಷನ್‌ ಒತ್ತಾಯ ತರವಲ್ಲ. ಈ ತಕರಾರಿನ ಕೇಂದ್ರಬಿಂದು ಸಾಕ್ಷಿಯು ಮೃತ ವ್ಯಕ್ತಿಯ ತಾಯಿಯಾಗಿದ್ದು ನೋವುಂಡಿರುವ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪೀಠ ಉದಾರವಾಗಿ ಪರಿಗಣಿಸಬೇಕು” ಎಂಬ ದರ್ಶನ್‌ ಪರ ವಕೀಲ ಹಷ್ಮತ್‌ ಪಾಷ ಅವರ ವಾದಾಂಶವನ್ನು ಮನ್ನಿಸಿರುವ ಪೀಠವು ‘ಒಂದು ಬಿಡಿ ಹೇಳಿಕೆಯನ್ನು ವಿರೋಧಿ ಸಾಕ್ಷಿಯಾಗಿ ಪರಿವರ್ತಿಸಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

“ರತ್ನಪ್ರಭಾ ಅವರು ಪ್ರಾಸಿಕ್ಯೂಷನ್‌ಗೆ ಬೆನ್ನು ತಿರುಗಿಸಿಲ್ಲ ಅಥವಾ ಪ್ರತಿವಾದಿ ಪಕ್ಷದ ಕಡೆಗೆ ವಾಲಿಲ್ಲ. ತಮ್ಮ ಮುಖ್ಯ ವಿಚಾರಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳಿಂದ ಸಂಪೂರ್ಣವಾಗಿ ಹಿಂದೆಯೂ ಸರಿದಿಲ್ಲ; ಹಾಗೆಯೇ ‍ಪ್ರಾಸಿಕ್ಯೂಷನ್‌ ಪ್ರಕರಣದ ಮೂಲ ಆಧಾರವನ್ನೂ ಅವರು ನಿರಾಕರಿಸಿಲ್ಲ. ಅಂತೆಯೇ, ಪ್ರಾಸಿಕ್ಯೂಷನ್‌ ಕಡೆಯಿಂದ ಪ್ರತಿವಾದಿ ಪಕ್ಷದ ಕಡೆಗೆ ಅವರು ತಮ್ಮ ನಿಷ್ಠೆ ಬದಲಾಯಿಸಿರಬಹುದು ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ” ಎಂಬ ಅಂಶವನ್ನು ಪೀಠ ಅವಲೋಕಿಸಿದೆ.

“ವೈರತ್ವ ಅಥವಾ ಪ್ರತಿಕೂಲ ನಿಲುವು ಎಂಬುದನ್ನು ಬಿಂಬಿಸಲು ಪ್ರಯತ್ನಿಸಲಾಗುತ್ತಿರುವ ವಿಷಯವು, ಸಾಕ್ಷ್ಯ ನುಡಿಯುವಾಗ ಆಕಸ್ಮಿಕವಾಗಿ ನೀಡಲಾದ ಒಂದು ಹೇಳಿಕೆ ಅಥವಾ ಅಜಾಗರೂಕತೆಯ ಕ್ಷಣದಲ್ಲಿ ನೀಡಿದ ಉತ್ತರವಷ್ಟೇ ಆಗಿದೆ. ಇಂತಹ ಒಂದು ಆಕಸ್ಮಿಕ ಉತ್ತರವನ್ನು ಪ್ರಾಸಿಕ್ಯೂಷನ್‌ ಪ್ರಕರಣವನ್ನೇ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.

“ತನ್ನದೇ ಆದ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಲು ಪ್ರಾಸಿಕ್ಯೂಷನ್‌ ನ್ಯಾಯಾಲಯದಿಂದ ಅನುಮತಿ ಪಡೆಯುವುದು ಸಲ್ಲ. ಹೀಗಾಗಿ, ವಿಚಾರಣಾ ನ್ಯಾಯಾಲಯದ ಆದೇಶವು ಸಮರ್ಥನೀಯ ಕಾರಣಗಳ ಮೇಲೆ ಆಧಾರಿತವಾದ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿದ ತತ್ವಗಳಿಗೆ ಸಂಪೂರ್ಣ ಅನುಗುಣವಾಗಿದೆ. ಆದ್ದರಿಂದ, ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ” ಎಂದು ಅರ್ಜಿಯನ್ನು ತಿರಸ್ಕರಿಸಿದೆ.

“ವಿವಿಧ ಹೈಕೋರ್ಟ್‌ಗಳೂ ಸೇರಿದಂತೆ ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲಿ ಪ್ರತಿಪಾದಿಸಿರುವ ಕಾನೂನು ತತ್ವಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ, ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 154 ರ ಅಡಿಯಲ್ಲಿ ವಿವೇಚನಾ ಅಧಿಕಾರವನ್ನು ಚಲಾಯಿಸಲು ಒತ್ತಾಯಿಸುವ ಅಥವಾ ಸಮರ್ಥಿಸುವಂತಹ ಯಾವುದೇ ಸನ್ನಿವೇಶವು ಕಂಡುಬರುವುದಿಲ್ಲ” ಎಂದು ಪೀಠ ಹೇಳಿದೆ.

ರತ್ನಪ್ರಭಾ ಅವರ ಪಾಟಿ ಸವಾಲು ನಡೆಸಲು ಪ್ರಾಸಿಕ್ಯೂಷನ್‌ ಕೋರಿದ್ದ ಅನುಮತಿಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ನಿರಾಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. 

ದರ್ಶನ್‌ ಪರ ಹೈಕೋರ್ಟ್‌ ವಕೀಲ ಎನ್‌ ಎ ಕಾರಿಯಪ್ಪ ವಕಾಲತ್ತು ವಹಿಸಿದ್ದರೆ, ಉಳಿದ ಆರೋಪಿಗಳ ಪರ ಆರ್‌ ರಂಗನಾಥ ರೆಡ್ಡಿ ಹಾಗೂ ಡಿ ಎಸ್‌ ಸುಧನ್ವ ವಾದ ಮಂಡಿಸಿದ್ದರು.