A1
A1
ಸುದ್ದಿಗಳು

ಯುಎಪಿಎ ಇರಲಿ, ದೇಶದ್ರೋಹ ಕಾನೂನು ರದ್ದುಗೊಳಿಸಿ: ಭೀಮಾ ಕೋರೆಗಾಂವ್ ಆಯೋಗಕ್ಕೆ ಶರದ್ ಪವಾರ್

Bar & Bench

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿನ ನಿಬಂಧನೆಗಳು ರಾಷ್ಟ್ರ ಮತ್ತು ರಾಷ್ಟ್ರೀಯ ಭದ್ರತೆಯ ವಿರುದ್ಧದ ಅಪರಾಧಗಳನ್ನು ಎದುರಿಸಲು ಸಾಕಾಗುವುದರಿಂದ ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 124 ಎ ರದ್ದುಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಭೀಮಾ ಕೋರೆಗಾಂವ್ ವಿಚಾರಣಾ ಆಯೋಗಕ್ಕೆ ತಿಳಿಸಿದ್ದಾರೆ.

ಡಿಸೆಂಬರ್ 31, 2017 ರಂದು ಎಲ್ಗಾರ್ ಪರಿಷತ್ ಕಾರ್ಯಕ್ರಮದ ಸಮಯದಲ್ಲಿ ದಲಿತ ಮತ್ತು ಮರಾಠ ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ.

ಪದಗಳು, ಇಲ್ಲವೇ ಮಾತು ಅಥವಾ ಕ್ರಿಯೆಯ ಮೂಲಕ ಸರ್ಕಾರದ ವಿರುದ್ಧ ದ್ವೇಷ ಅಥವಾ ನಿಂದನೆಗೆ ಮುಂದಾಗುವವರಿಗೆ ಜೀವಾವಧಿಯವರೆಗಿನ ಶಿಕ್ಷೆಯನ್ನು ಸೆಕ್ಷನ್‌ 124 ಎ ಅಡಿ ನೀಡಬಹುದು. ದೇಶದ್ರೋಹ ಎಂಬುದು ಜಾಮೀನು ರಹಿತ ಅಪರಾಧವಾಗಿದೆ.

ಬುಧವಾರ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ ಪವಾರ್‌ ಹೇಳಿರುವ ಪ್ರಮುಖ ಅಂಶಗಳು ಹೀಗಿವೆ:

  • 124 ಎ ಸೆಕ್ಷನನ್ನು ಬ್ರಿಟಿಷರು ತಮ್ಮ ವಿರುದ್ಧ ಏಳುತ್ತಿದ್ದ ದಂಗೆಗಳನ್ನು ನಿಯಂತ್ರಿಸಲು ಮತ್ತು ಸ್ವಾತಂತ್ರ್ಯ ಚಳವಳಿ ಹತ್ತಿಕ್ಕಲು 1870 ರಲ್ಲಿ ಜಾರಿಗೆ ತಂದರು. ಸರ್ಕಾರವನ್ನು ಟೀಕಿಸುವ ಜನರ ವಿರುದ್ಧವೂ ಅದನ್ನು ದುರ್ಬಳಕೆ ಮಾಡಿ ಅವರ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಬೇಧವನ್ನು ಹತ್ತಿಕ್ಕಲಾಗುತ್ತಿದೆ.

  • ತಿದ್ದುಪಡಿ ತರುವ ಮೂಲಕ ಐಪಿಸಿಯ ಸೆಕ್ಷನ್ 124ಎ ದುರುಪಯೋಗ ನಿಲ್ಲಿಸಬೇಕು ಅಥವಾ ಈ ಸೆಕ್ಷನ್ನನ್ನೇ ರದ್ದುಗೊಳಿಸಬೇಕು. ನಾನು ಹಾಗೆ ಹೇಳಲು ಕಾರಣವಿದೆ ಏಕೆಂದರೆ ರಾಷ್ಟ್ರೀಯ ಸಮಗ್ರತೆಯನ್ನು ರಕ್ಷಿಸಲು ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ ನಿಬಂಧನೆಗಳು ಸಾಕಾಗುತ್ತವೆ

  • ಪ್ರತಿಭಟನಾಕಾರರು ಮತ್ತು ಸರ್ಕಾರ/ಪೊಲೀಸ್ ಅಧಿಕಾರಿಗಳ ನಡುವೆ ಸಂವಹನ ಸೇತುವೆಯಾಗಿ ಜವಾಬ್ದಾರಿಯುತ ಮಾಧ್ಯಮಗಳು ಕಾರ್ಯ ನಿರ್ವಹಿಸಬಹುದು. ಅವು ಉದ್ವಿಗ್ನತೆ ಕಡಿಮೆ ಮಾಡಿ ತಪ್ಪು ಮಾಹಿತಿಯನ್ನು ತಡೆಯಬಹುದು.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್‌ ಯುದ್ಧ ಸ್ಮಾರಕದ ಬಳಿ 2018ರ ಜನವರಿಯಲ್ಲಿ ನಡೆದ ಹಿಂಸಾಚಾರ ಕುರಿತು ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ಮತ್ತು 6ರಂದು ಪವಾರ್‌ ಅವರು ಹಾಜರಾಗುವಂತೆ ಆಯೋಗ ಆದೇಶ ನೀಡಿತ್ತು. ತಮ್ಮ ಸಾಕ್ಷ್ಯ ದಾಖಲಿಸುವ ಮೊದಲು ಪವಾರ್‌ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಇಚ್ಛಿಸಿದ್ದರು.