lawyers 
ಸುದ್ದಿಗಳು

ವಕೀಲರ ಪೋಷಕರನ್ನೂ ಕೇಂದ್ರದ ಉದ್ದೇಶಿತ ವಿಮಾ ಯೋಜನೆ ವ್ಯಾಪ್ತಿಗೆ ತರಲು ಕೋರಿಕೆ: ರೋಸ್ಟರ್‌ ಪೀಠಕ್ಕೆ ಅರ್ಜಿ ವರ್ಗಾವಣೆ

Bar & Bench

ವೃತ್ತಿ ನಿರತ ವಕೀಲರ ಪೋಷಕರನ್ನೂ ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರವು ಸಾಮಾಜಿಕ ಕ್ರಿಯಾ ದಾವೆಯ ಗುಣ ಹೊಂದಿದೆ ಎಂದಿರುವ ಕರ್ನಾಟಕ ಹೈಕೋರ್ಟ್‌, ಅರ್ಜಿಯನ್ನು ರೋಸ್ಟರ್‌ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಸೋಮವಾರ ನಿರ್ದೇಶಿಸಿದೆ.

ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ‌ ಪೀಠ ವಿಚಾರಣೆ ನಡೆಸಿತು.

“ವಿಚಾರವು ಸಾಮಾಜಿಕ ಕ್ರಿಯೆ ದಾವೆಯ ಗುಣ ಹೊಂದಿದೆ. ಹೀಗಾಗಿ, ರೋಸ್ಟರ್‌ ಪೀಠದ ಮುಂದೆ ರಿಜಿಸ್ಟ್ರಿಯು ಪ್ರಕರಣವನ್ನು ಪಟ್ಟಿ ಮಾಡಬೇಕು. ಹತ್ತು ದಿನಗಳ ಒಳಗೆ ಅರ್ಜಿದಾರರು ಎರಡನೇ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಅರ್ಜಿ ವಜಾಗೊಳ್ಳಲಿದೆ” ಎಂದು ಆದೇಶದಲ್ಲಿ ಹೇಳಿದೆ.

ವಕೀಲ ಎಲ್ ರಮೇಶ್ ನಾಯಕ್ ಅವರು, ವೃತ್ತಿ ನಿರತ ವಕೀಲರಿಗೆ ವಿಮಾ ಸೌಲಭ್ಯ ಒದಗಿಸುವ ವಿಚಾರವಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಲವು ಸುತ್ತಿನ ಸಭೆ ನಡೆಸಿ, ಚರ್ಚಿಸಿದೆ. ಕೇಂದ್ರ ಸರ್ಕಾರವು ವಿಮಾ ಯೋಜನೆ ರೂಪಿಸಲು ಸಮ್ಮತಿಸಿದೆ. ಜೊತೆಗೆ, ವೃತ್ತಿ ನಿರತ ವಕೀಲರ ಮಾಹಿತಿ ಒದಗಿಸುವಂತೆ ಎಲ್ಲಾ ರಾಜ್ಯಗಳ ವಕೀಲರ ಪರಿಷತ್‌ಗೆ ಬಿಸಿಐ ಸೂಚಿಸಿದೆ ಎಂದು ವಿವರಿಸಿದರು.

ಅಲ್ಲದೇ, ಬಿಸಿಐ ಸೂಚನೆಯಂತೆ ಕರ್ನಾಟಕ ವಕೀಲರ ಪರಿಷತ್ ಸಹ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದು, ಸಂಘದ ಎಲ್ಲಾ ಸದಸ್ಯರ ಹೆಸರು, ವಯಸ್ಸು, ಅವರ ಪತಿ/ಪತ್ನಿ ಮತ್ತು ಮಕ್ಕಳ ಹೆಸರುಗಳನ್ನು ಒದಗಿಸುವಂತೆ ಸೂಚಿಸಿದೆ. ಆದರೆ, ವಕೀಲರ ಪೋಷಕರನ್ನು ವಕೀಲರ ಅವಲಂಬಿತರಾಗಿ ಪರಿಗಣಿಸುತ್ತಿಲ್ಲ. ವಕೀಲರ ಪೋಷಕರನ್ನು ವಿಮಾ ಯೋಜನೆ ವ್ಯಾಪ್ತಿಗೆ ತರಬೇಕಿದೆ. ಈ ಕುರಿತಂತೆ ಕರ್ನಾಟಕ ವಕೀಲ ಪರಿಷತ್‌ಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದ್ದರಿಂದ, ವಕೀಲರ ವಿಮಾ ಯೋಜನೆ ವ್ಯಾಪ್ತಿಗೆ ಪೋಷಕರನ್ನು ತರುವಂತೆ ರಾಜ್ಯ ಸರ್ಕಾರ, ಭಾರತೀಯ ವಕೀಲರ ಪರಿಷತ್ ಮತ್ತು ಕರ್ನಾಟಕ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.