Karnataka High Court and PM Modi 
ಸುದ್ದಿಗಳು

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋಗೆ ತಡೆ ನೀಡಲು ಕೋರಿಕೆ; ವಿಶೇಷ ಪೀಠದಿಂದ ವಿಚಾರಣೆ

ವಕೀಲ ಎನ್‌ ಪಿ ಅಮೃತೇಶ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಧ್ಯಾಹ್ನ ನಡೆಸಲಿದೆ.

Siddesh M S

ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ನಡೆಸಲು ಉದ್ದೇಶಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 36 ಕಿ.ಮೀ ರೋಡ್‌ ಶೋಗೆ ತಡೆ ನೀಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಧ್ಯಾಹ್ನ ನಡೆಸಲಿದೆ. ಪ್ರಧಾನಿ ರೋಡ್‌ ಷೋಗೆ ತಡೆ ನೀಡದಿದ್ದರೆ ಸಾಮಾನ್ಯ ಜನರಿಗೆ ಸರಿಪಡಿಸಲಾಗದಷ್ಟು ನಷ್ಟ ಉಂಟಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಕೀಲ ಎನ್‌ ಪಿ ಅಮೃತೇಶ್‌ ಅವರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಧ್ಯಾಹ್ನ 2:30 ವಿಚಾರಣೆಗೆ ಪಟ್ಟಿಯಾಗಿದೆ.

ರಾಜ್ಯ ಬಿಜೆಪಿಯು ರೋಡ್‌ ಶೋ ನಡೆಸುವುದಕ್ಕೆ ನೀಡಿರುವ ಅನುಮತಿ, ಸಂಚಾರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರ, ಪೊಲೀಸ್‌ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಅನುಮತಿ ನೀಡದಂತೆ ಪೊಲೀಸ್‌ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು. ರೋಡ್‌ ಶೋ ನಿರ್ಬಂಧ ಮತ್ತು ಫಲಿತಾಂಶ ಪ್ರಕಟವಾದ ಬಳಿಕ ವಿಜಯೋತ್ಸವ ನಡೆಸದಂತೆ ಸರ್ಕಾರ, ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಇದರಿಂದ ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಸಮಾಜಘಾತುಕ ಶಕ್ತಿಗಳಿಂದ ಅಹಿತಕರ ಘಟನೆಗೆ ಅವಕಾಶ ಇರುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ 36 ಕಿ ಮೀ ವ್ಯಾಪ್ತಿಯಲ್ಲಿ ಮೋದಿ ರೋಡ್‌ ಶೋ ನಡೆಸಲು ಉದ್ದೇಶಿಸಲಾಗಿದ್ದು, ಇದು ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ರೋಡ್‌ ಷೋ ಆರಂಭವಾಗಲಿದ್ದು, 45 ವಿಧಾನಸಭಾ ಕ್ಷೇತ್ರಗಳನ್ನು ಇದು ಒಳಗೊಳ್ಳಲಿದೆ. ಸಂಜೆ 4ಕ್ಕೆ ಮತ್ತೆ ರೋಡ್‌ ಶೋ ಆರಂಭವಾಗಲಿದ್ದು, 13 ವಿಧಾನಸಭಾ ಕ್ಷೇತ್ರಗಳಲ್ಲಿ ಇದು ನಡೆಯಲಿದೆ. ಬೆಂಗಳೂರಿನ ಪ್ರಮುಖ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಷೋ ಹಾದು ಹೋಗಲಿದ್ದು, ಇಲ್ಲಿ ಹಲವು ವಾಣಿಜ್ಯ ಮತ್ತು ಜನವಸತಿ ಪ್ರದೇಶಗಳು ಇವೆ. ರೋಡ್‌ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಸಂಸದ ಪಿ ಸಿ ಮೋಹನ್‌ ಹೇಳಿದ್ದಾರೆ. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಜನರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಉಂಟಾಗುವ ನಷ್ಟವನ್ನು ರಾಜಕೀಯ ಪಕ್ಷಗಳು ತುಂಬಿಕೊಡುವುದಿಲ್ಲ ಎಂದು ವಿವರಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಚೇರಿಗೆ ಹೋಗುವವರಿಗೆ ಭಾರಿ ಸಮಸ್ಯೆಯಾಗಲಿದೆ. ಹೀಗಾಗಿ ರೋಡ್‌ ಶೋ ನಿರ್ಬಂಧಿಸುವಂತೆ ಕೋರಲಾಗಿದೆ.