Karnataka High Court
Karnataka High Court 
ಸುದ್ದಿಗಳು

ಪಂಚಮಸಾಲಿ ಮೀಸಲಾತಿ: ತಜ್ಞರ ಸಮಿತಿ ರಚನೆ ಆದೇಶ ರದ್ದಿಗೆ ಕೋರಿದ್ದ ಮನವಿಯನ್ನು ವಿಭಾಗೀಯ ಪೀಠದ ಮುಂದಿಡಲು ಶಿಫಾರಸ್ಸು

Bar & Bench

ವೀರಶೈವ-ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆಗೆ ಮಾಡಬೇಕು ಎಂಬ ಬೇಡಿಕೆ ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಮಂಗಳವಾರ ವಿಭಾಗೀಯ ಪೀಠದ ವಿಚಾರಣೆಗೆ ಶಿಫಾರಸ್ಸು ಮಾಡಿದೆ.

ಕಾನೂನಿಗೆ ವಿರುದ್ಧವಾಗಿ ಉನ್ನತಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ಮನವಿದಾರರ ವಾದ ಆಲಿಸಿದ ಪೀಠವು ಈ ಪ್ರಕರಣವನ್ನು ವಿಭಾಗೀಯ ಪೀಠ ವಿಚಾರಣೆ ನಡೆಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಬಳಿಕ, ಅರ್ಜಿಯನ್ನು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವ ಸಂಬಂಧ ಸೂಕ್ತ ಆದೇಶ ಹೊರಡಿಸಲು ಅನುಕೂಲವಾಗುವಂತೆ ಅರ್ಜಿಗೆ ಸಂಬಂಧಿಸಿದ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿತು.

ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರಬೇಕು ಎಂಬ ಅರ್ಜಿದಾರವನ್ನು ಪೀಠ ಒಪ್ಪಲಿಲ್ಲ.

ಪಂಚಮಸಾಲಿ ಉಪ ಪಂಗಡವನ್ನು 3ಬಿ ವಿಭಾಗದಿಂದ 2ಎ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರ್ಕಾರವು 2021ರ ಜುಲೈ 1ರಂದು ಆದೇಶ ಹೊರಡಿಸಿತ್ತು.