High Court of Karnataka
High Court of Karnataka 
ಸುದ್ದಿಗಳು

ಬಡ್ತಿ ವೇಳೆ ಎದುರಾಗುವ ಮೀಸಲಾತಿ ಗೊಂದಲ ನಿವಾರಣೆಗೆ ಸಮಗ್ರ ಮಾರ್ಗಸೂಚಿ ರೂಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Bar & Bench

ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲು ಜಾರಿಗೊಳಿಸುವ ವೇಳೆ ಉಂಟಾಗುತ್ತಿರುವ ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ಕರ್ನಾಟಕ ನಾಗರಿಕ ಸೇವಾ ಕಾಯಿದೆ 2017ಕ್ಕೆ ಹೊಸತಾಗಿ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವುದು ಸೂಕ್ತ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯ ಸರ್ಕಾರದ ವಿವಿಧ ವಿದ್ಯುತ್‌ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ವರ್ಗಕ್ಕೆ ಸೇರಿದ ಮುಖ್ಯ ಎಂಜಿನಿಯರ್‌ಗಳು, ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನೊಳಗೊಂಡ ಬಿ ಗುರುಮೂರ್ತಿ ಮತ್ತಿತರ ಹಿರಿಯ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎಸ್‌ ಸುನೀಲ್ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ತೀಚೆಗೆ ನಡೆಸಿತು.

ವಿಚಾರಣೆ ವೇಳೆ ಪೀಠವು, 2017ರ ಕಾಯಿದೆಯನ್ನು ಜಾರಿಗೆ ತರಲು 2019ರ ಜೂ.24 ರಂದು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಕೆಲವು ಅಸ್ಪಷ್ಟತೆಗಳಿವೆ. ಅನಗತ್ಯ ಗೊಂದಲವನ್ನು ತಪ್ಪಿಸಲು ಸರ್ಕಾರವು ಈ ಆದೇಶ ಹಿಂಪಡೆಯುವುದು ಉತ್ತಮ. ಹೊಸ ಮಾರ್ಗಸೂಚಿ ಜಾರಿಗೊಳಿಸುವುದೇ ಸೂಕ್ತ ಎಂದು ಹೇಳಿತು.

ಹೊಸ ಮಾರ್ಗಸೂಚಿಗಳನ್ನು ರೂಪಿಸುವ ವೇಳೆ ಸುಪ್ರೀಂಕೋರ್ಟ್‌ನ ಈ ಹಿಂದಿನ ತೀರ್ಪುಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಬಡ್ತಿಯಲ್ಲಿನ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳ ಭರ್ತಿಯೂ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸೂಚಿಸಿತು. ಹೀಗೆ ಮಾಡುವುದರಿಂದ ಕಾಯಿದೆ ಅನುಷ್ಠಾನದಲ್ಲಿನ ಗೊಂದಲ ನಿವಾರಣೆಯಾಗುವುದಲ್ಲದೆ, ಅನಗತ್ಯ ವಾಜ್ಯಗಳು ಏರ್ಪಡುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರ ಅಧಿಕಾರಿಗಳು ಸರ್ಕಾರಿ ಆದೇಶದ ಕಾನೂನುಬದ್ಧತೆ ಮತ್ತು 2017ರ ಕಾಯಿದೆ ಮತ್ತು ಜಿಒ ಆಧರಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೂಚಿಸಿರುವ ಅಧಿಕಾರಿಗಳ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಶ್ನಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲ ಅಧಿಕಾರಿಗಳಿಗೆ ಕೆಪಿಟಿಸಿಎಲ್ ನೀಡಿರುವ ಬಡ್ತಿ ಕಾನೂನಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು. ಆದರೆ ನ್ಯಾಯಾಲಯವು ಅರ್ಜಿದಾರರ ವಾದವನ್ನು ತಿರಸ್ಕರಿಸಿ ಅರ್ಜಿಗಳನ್ನು ವಜಾಗೊಳಿಸಿತು. ಸರ್ಕಾರಿ ಆದೇಶದಲ್ಲಿನ ಅಸ್ಪಷ್ಟತೆಗಳನ್ನು ಅರ್ಥೈಸಿಕೊಳ್ಳದೆ ವಿಶ್ಲೇಷಣೆ ಮಾಡಬಾರದು ಎಂದು ಸ್ಪಷ್ಟಪಡಿಸಿತು.