ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು ರಾಜೀನಾಮೆ ನೀಡುವುದು 1954 ರ ಹೈಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ಷರತ್ತುಗಳು) ಕಾಯಿದೆಯಡಿ 'ನಿವೃತ್ತಿ' ಎಂದು ಅರ್ಹತೆ ಪಡೆಯುತ್ತದೆ ಎಂದು ಬಾಂಬೆ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಈ ತೀರ್ಪು ರಾಜೀನಾಮೆ ನೀಡಿದ ವ್ಯಕ್ತಿಗೆ ಪಿಂಚಣಿ ಪ್ರಯೋಜನಗಳಿಗೆ ಅರ್ಹತೆಯನ್ನು ನೀಡುತ್ತದೆ [ಪುಷ್ಪಾ ಗನೇಡಿವಾಲಾ vs ಬಾಂಬೆ ಹೈಕೋರ್ಟ್ ಆಫ್ ಜ್ಯೂಡಿಕೇಚರ್].
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ವಿವಾದಾತ್ಮಕ ತೀರ್ಪು ನೀಡಿದ್ದ ಪುಷ್ಪಾ ಗನೇಡಿವಾಲಾ ಅವರಿಗೆ ಪಿಂಚಣಿ ನೀಡಲು ಅನುಮತಿಸುವ ವೇಳೆ ಬಾಂಬೆ ಹೈಕೋರ್ಟ್ ಈ ತೀರ್ಪು ನೀಡಿದೆ.
ವಿವಾದಾತ್ಮಕ ಪೋಕ್ಸೋ ತೀರ್ಪಿನ ಹಿನ್ನೆಲೆಯಲ್ಲಿ ಕೊಲಿಜಿಯಂ ತಮ್ಮ ಸೇವೆಯನ್ನು ಖಾಯಂಗೊಳಿಸದ ಕಾರಣ ಫೆಬ್ರವರಿ 2022 ರಲ್ಲಿ ಸ್ವಯಂಪ್ರೇರಣೆಯಿಂದ ಗನೇಡಿವಾಲಾ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿದಾರರಿಗೆ ಪಿಂಚಣಿ ನಿರಾಕರಿಸಿ ಬಾಂಬೆ ಹೈಕೋರ್ಟ್ ರಿಜಿಸ್ಟ್ರಾರ್ ಹೊರಡಿಸಿದ್ದ ಹಿಂದಿನ ಆದೇಶವನ್ನು ರದ್ದುಗೊಳಿಸಿತು. "ಬಾಂಬೆ ಹೈಕೋರ್ಟ್‌ನ ರಿಜಿಸ್ಟ್ರಾರ್ (ಮೂಲ ವಿಭಾಗ) ಅವರು 02.11.2022 ರಂದು ಹೊರಡಿಸಿದ ಆಕ್ಷೇಪಾರ್ಹ ಆದೇಶವನ್ನು ರದ್ದುಗೊಳಿಸಿ, ಬದಿಗೆ ಸರಿಸಲಾಗಿದೆ. ಅರ್ಜಿದಾರರು 14/02/2022 ರಿಂದ ಜಾರಿಗೆ ಬರುವಂತೆ ಪಿಂಚಣಿಗೆ ಅರ್ಹರಾಗಿದ್ದಾರೆ. ಪ್ರತಿವಾದಿಗಳು ಇಂದಿನಿಂದ ಎರಡು ತಿಂಗಳ ಅವಧಿಯೊಳಗೆ ವಾರ್ಷಿಕ 6% ದರದಲ್ಲಿ ಬಡ್ಡಿಯೊಂದಿಗೆ ಅರ್ಜಿದಾರರಿಗೆ 14.02.2022 ರಿಂದ ಪಿಂಚಣಿ ಪ್ರಯೋಜನಗಳನ್ನು ನಿಗದಿಪಡಿಸಿ ಮಂಜೂರು ಮಾಡಲು ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2019 ರಲ್ಲಿ ಬಡ್ತಿ ಪಡೆಯುವ ಮೊದಲು ಗನೇಡಿವಾಲಾ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರನ್ನು ಖಾಯಂ ನ್ಯಾಯಮೂರ್ತಿಯಾಗಿಸದೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರ ಅವಧಿಯನ್ನು ಫೆಬ್ರವರಿ 2021 ರಲ್ಲಿ ವಿಸ್ತರಿಸಲಾಗಿತ್ತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ವಿವಾದಾತ್ಮಕ ತೀರ್ಪು ನೀಡಿದ್ದ ಗನೇಡಿವಾಲಾ ಅವರಿಗೆ ಅದುವೇ ಹಿನ್ನೆಡೆಯಾಗಿತ್ತು. ಅವರು ಜನವರಿ 2021ರಲ್ಲಿ ಪೋಕ್ಸೋ ಪ್ರಕರಣದಲ್ಲಿ ಬರೆದ 'ಚರ್ಮದಿಂದ ಚರ್ಮಕ್ಕೆ ಸಂಪರ್ಕವೇರ್ಪಟ್ಟರೆ ಮಾತ್ರ ಪೋಕ್ಸೋ ಕಾಯಿದೆ ಅನ್ವಯವಾಗುತ್ತದೆ ಎನ್ನುವ ವಿವಾದಾತ್ಮಕ ತೀರ್ಪು ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದಲ್ಲದೆ, ನ್ಯಾಯಿಕ ವಲಯದಲ್ಲಿ ಖಂಡನೆಗೆ ಗುರಿಯಾಗಿತ್ತು.
ಅಂತಿಮವಾಗಿ ಗನೇಡಿವಾಲಾ ಅವರು ಫೆಬ್ರವರಿ 11, 2022 ರಂದು ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡಿದ್ದರು. ಮಾರ್ಚ್ 2023 ರಲ್ಲಿ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು.
ರಾಜೀನಾಮೆಯ ನಂತರ, ಗನೇಡಿವಾಲಾ ಅವರು ತಾವು ಜಿಲ್ಲಾ ನ್ಯಾಯಾಧೀಶರು ಮತ್ತು ಹೆಚ್ಚುವರಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಒಟ್ಟು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಪಿಂಚಣಿ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಿದರು.
ನವೆಂಬರ್ 2022 ರಲ್ಲಿ, ಹೈಕೋರ್ಟ್ ರಿಜಿಸ್ಟ್ರಾರ್ ಅವರು ಗನೇಡಿವಾಲಾ ಅವರು ಪಿಂಚಣಿಗೆ ಅರ್ಹರಲ್ಲ ಎಂದು ಅವರಿಗೆ ತಿಳಿಸಿದ್ದರು. ರಾಜೀನಾಮೆಯು 1954 ರ ಕಾಯ್ದೆಯಡಿ ನಿವೃತ್ತಿಯಡಿ ಬರುವುದಿಲ್ಲ ಎನ್ನುವುದು ಇದಕ್ಕೆ ನೀಡಿದ ಕಾರಣವಾಗಿದ್ದು. ಈ ನಿರ್ಧಾರದ ವಿರುದ್ಧ ಗನೇಡಿವಾಲಾ ಅವರು ಬಾಂಬೆ ಹೈಕೋರ್ಟ್‌ನ ಮೊರೆ ಹೋದರು.