Chief Justice P B Varale and Justice Krishna S. Dixit 
ಸುದ್ದಿಗಳು

ಉದ್ಯೋಗದಾತರಿಗೆ ಸಲ್ಲಿಸಿದ ರಾಜೀನಾಮೆಯನ್ನು ಉದ್ಯೋಗಿ ಪರವಾಗಿ ಪತ್ನಿ ಹಿಂಪಡೆಯಲಾಗದು: ಹೈಕೋರ್ಟ್‌

Bar & Bench

ಉದ್ಯೋಗದಾತರಿಗೆ ಉದ್ಯೋಗಿ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪರವಾಗಿ ಪತ್ನಿ ಹಿಂಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಪತ್ನಿಯ ಮನವಿ ಮೇರೆಗೆ ರಾಜೀನಾಮೆ ಪತ್ರ ಅಂಗೀಕರಿಸದಿರಲು ಉದ್ಯೋಗದಾತ ಸಂಸ್ಥೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಮದ್ದೂರಿನ ಡಿ.ವೆಂಕಟೇಶ್‌ ಎಂಬಾತ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಸ್ವತಃ ನೌಕರನೇ ಉದ್ಯೋಗದಲ್ಲಿ ಇರಲು ಸಿದ್ಧನಿಲ್ಲದೆ ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆತನ ಪತ್ನಿ ಅಥವಾ ಮಕ್ಕಳು ಉದ್ಯೋಗಿ ಸೇವೆಯಲ್ಲಿ ಮುಂದುವರಿಯಲು ಹೇಗೆ ಕಾರಣವಾಗುತ್ತಾರೆ. ಇದು ಬಾಯಾರಿಕೆಯಿಲ್ಲದಿದ್ದರೂ ಇಷ್ಟವಿಲ್ಲದ ಕುದುರೆಯನ್ನು ನೀರು ಕುಡಿಯಲು ನದಿಗೆ ದೂಡಿದಂತಾಗಿದೆ. ರಾಜೀನಾಮೆಯು ಉದ್ಯೋಗಿಯ ಸ್ವಯಂಪ್ರೇರಿತ ನಿರ್ಧಾರ. ಅದನ್ನು ಸಲ್ಲಿಸುವ ಮೂಲಕ ಆತ ಸೇವೆಯನ್ನು ತೊರೆಯಲು ಪ್ರಯತ್ನಿಸುತ್ತಾನೆ. ಹೀಗಾಗಿ, ಉದ್ಯೋಗದಾತ ಸಂಸ್ಥೆಯು ಅಂಗೀಕರಿಸುವ ಮೊದಲೇ ರಾಜೀನಾಮೆಯನ್ನು ಸ್ವತಃ ಉದ್ಯೋಗಿ ಹಿಂಪಡೆಯಬೇಕು. ಅದು ಹೊರತುಪಡಿಸಿ ಪತ್ನಿ ಮತ್ತು ಮಕ್ಕಳು ಉದ್ಯೋಗಿಯ ಪರವಾಗಿ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲ” ಎಂದು ಪೀಠ ಹೇಳಿದೆ.

“ಉದ್ಯೋಗಿಯೇ ರಾಜೀನಾಮೆ ಪತ್ರ ಹಿಂಪಡೆಯಬೇಕು. ಹಿಂಪಡೆಯುವ ಮನವಿಯು ಉದ್ಯೋಗಿಯಿಂದಲೇ ಸಲ್ಲಿಕೆಯಾಗಬೇಕು. ಈ ಪ್ರಕರಣದಲ್ಲಿ ನೌಕರನ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಆತನ ಪತ್ನಿ ಕೋರಿದ್ದಾರೆ. ಉದ್ಯೋಗಿಯ ಪತ್ನಿಯ ಅಂತಹ ಹಕ್ಕು ಹೊಂದಿರುವುದನ್ನು ದೃಢಿಕರಿಸುವ ಯಾವುದೇ ನಿಯಮವನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಇಂತಹ ಪರಿಕಲ್ಪನೆಯು ಸೇವಾ ಕಾನೂನಿಗೆ ವಿರುದ್ಧವಾಗಿದೆ” ಎಂದು ಆದೇಶಿಸಿ, ಏಕ ಸದಸ್ಯ ಪೀಠದ ತೀರ್ಪನ್ನು ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯದ ಮದ್ದೂರಿನ ಡಿ ವೆಂಕಟೇಶ್ ಎಂಬುವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಉದ್ಯೋಗಿಯಾಗಿದ್ದರು. 2021ರ ನವೆಂಬರ್‌ 11ರಂದು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕರಿಸುವ ನಿರ್ಣಯವನ್ನು ಸಂಘವು ಕೈಗೊಂಡಿತ್ತು. ಬಳಿಕ ಉದ್ಯೋಗಿ ಪತ್ನಿ ರಾಜೀನಾಮೆ ಪತ್ರ ಹಿಂಪಡೆಯಲು ಅನುಮತಿ ಕೋರಿ ಉದ್ಯೋಗ ಸಂಸ್ಥೆಗೆ ಪತ್ರ ಸಲ್ಲಿಸಿದ್ದರು. ಅದನ್ನು ಆಧರಿಸಿ ರಾಜೀನಾಮೆ ಅಂಗೀಕರಿಸದಿರಲು ಸಂಘವು ನಿರ್ಣಯ ತೆಗೆದುಕೊಂಡಿತ್ತು.

ಇದನ್ನು ಪ್ರಶ್ನಿಸಿ ಸಂಘದ ಮತ್ತೋರ್ವ ಉದ್ಯೋಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ವೆಂಕಟೇಶ್‌ ಅವರ ರಾಜೀನಾಮೆ ಅಂಗೀಕರಿಸದಿರಲು ಸಂಘ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿ 2022ರ ಅಕ್ಟೋಬರ್‌ 13ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ವೆಂಕಟೇಶ್‌ ವಿಭಾಗೀಯ ಪೀಠದ ಮೊರೆ ಹೋಗಿದ್ದರು.

ಅರ್ಜಿದಾರರ ಪರವಾಗಿ ವಕೀಲ ದೇವಿ ಪ್ರಸಾದ್‌ ಶೆಟ್ಟಿ ವಾದಿಸಿದ್ದರು.

D Venkatesh Vs The Registrar of Co-op Societies.pdf
Preview