NCLT Bengaluru, Captain GR Gopinath  
ಸುದ್ದಿಗಳು

ಏರ್ ಡೆಕನ್‌ನ ಕ್ಯಾ. ಗೋಪಿನಾಥ್‌ರನ್ನು ವೈಯಕ್ತಿಕ ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ಪರಿಹಾರ ವೃತ್ತಿಪರರ ಶಿಫಾರಸ್ಸು

2011ರಿಂದ ಸ್ಥಗಿತಗೊಂಡಿರುವ ಡೆಕನ್ ಕಾರ್ಗೋಗೆ ಎಸ್‌ಬಿಐ ಒದಗಿಸಿದ್ದ ₹400 ಕೋಟಿ ಸಾಲಕ್ಕೆ ಗೋಪಿನಾಥ್ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.

Bar & Bench

ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಏರ್ ಡೆಕನ್‌ ಸಂಸ್ಥಾಪಕ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರನ್ನು ವೈಯಕ್ತಿಕ ದಿವಾಳಿ ಪ್ರಕ್ರಿಯೆಗೆ ಒಳಪಡಿಸುವಂತೆ ಅವರ ದಿವಾಳಿ ಪರಿಹಾರ ವೃತ್ತಿಪರರು (ರೆಸಲ್ಯೂಷನ್ ಪ್ರೊಫೆಷನಲ್ -ಆರ್‌ಪಿ) ಸೋಮವಾರ ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಶಿಫಾರಸು ಮಾಡಿದ್ದಾರೆ [ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತುಕ್ಯಾಪ್ಟನ್‌ ಜಿ ಆರ್‌ ಗೋಪಿನಾಥ್ ಅಯ್ಯಂಗಾರ್ ನಡುವಣ ಪ್ರಕರಣ].

2011ರಿಂದ ನಿಷ್ಕ್ರಿಯವಾಗಿರುವ ಡೆಕನ್‌ ಕಾರ್ಗೊಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)  ನೀಡಿದ್ದ  ₹400 ಕೋಟಿಗೂ ಹೆಚ್ಚು ಸಾಲವನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಶಿಫಾರಸು ಮಾಡಲಾಗಿದೆ. ಸಾಲಕ್ಕೆ ಗೋಪಿನಾಥ್ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.

ಗೋಪಿನಾಥ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಚಾಲನೆ ನಿಡಲು 2022ರಲ್ಲಿ ಎಸ್‌ಬಿಐ ಮುಂದಾಗಿತ್ತು. ಎನ್‌ಸಿಎಲ್‌ಟಿ ನೋಟಿಸ್ ನೀಡಿ ಭುವನೇಶ್ವರಿ ಅವರನ್ನು ಗೋಪಿನಾಥ್ ಅವರ ಆರ್‌ಪಿಯಾಗಿ ನೇಮಿಸಿದ ನಂತರ ಈ ಬೆಳವಣಿಗೆ ನಡೆದಿತ್ತು.

ಐಬಿಸಿ ಕಾಯಿದೆ ಅಡಿಯಲ್ಲಿ ವೈಯಕ್ತಿಕ ಜಾಮೀನುದಾರರಿಗೆ ಸಂಬಂಧಿಸಿದ ನಿಬಂಧನೆಗಳ ವಿರುದ್ಧ ಅರ್ಜಿಗಳು ಬಾಕಿಯಿದ್ದ ಕಾರಣ, ಅಂದಿನಿಂದ ಪ್ರಕರಣವು ಆಮೆವೇಗದಲ್ಲಿ ಮುಂದುವರೆದಿದ್ದವು. ಅಂತಿಮವಾಗಿ ಸುಪ್ರೀಂ ಕೋರ್ಟ್ ನವೆಂಬರ್ 2023 ರಲ್ಲಿ ನಿಬಂಧನೆಗಳ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಆ ಮೂಲಕ ಕಂಪೆನಿಯು ಮುಳುಗಿದ ಸಂದರ್ಭದಲ್ಲಿ ವೈಯಕ್ತಿಕ ಜಾಮೀನುದಾರರ ಆಸ್ತಿಪಾಸ್ತಿಯನ್ನು ವಶಪಡಿಸಿಕೊಂಡು ಮಾರಲು ಇದ್ದ ತಡೆಗಳನ್ನು ನಿವಾರಿಸಿತ್ತು.

ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ಜನವರಿ 7, 2025ಕ್ಕೆ ಪ್ರಕರಣವನ್ನು ನ್ಯಾಯಾಂಗ ಸದಸ್ಯ ಎ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರನ್ನೊಳಗೊಂಡ ಪೀಠ ಇಂದು ಮುಂದೂಡಿತು.

ಕನ್ನಡಿಗ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರು 2003ರಲ್ಲಿ ಏರ್ ಡೆಕನ್‌ ಸ್ಥಾಪಿಸಿದರು. ಇದು ಭಾರತದ ಮೊದಲ ಕಡಿಮೆ-ವೆಚ್ಚದಲ್ಲಿ ವಿಮಾನಯಾನ ಸೇವೆ ಒದಗಿಸುವ ಸಂಸ್ಥೆಯಾಗಿತ್ತು. ಕೈಗೆಟಕುವ ದರದಲ್ಲಿ ಜನಸಾಮಾನ್ಯರ ವಿಮಾನಯಾನವನ್ನು ಸಾಕಾರಗೊಳಿಸಲು ಅಡಿಯಿಟ್ಟ ಕಂಪೆನಿ ಜನಸಾಮಾನ್ಯನ ಕಂಪೆನಿ ಎಂದು ಗುರುತಿಸಿಕೊಂಡಿತು. ಆದರೂ ತೀವ್ರ ಪೈಪೋಟಿ ಮತ್ತು ಆರ್ಥಿಕ ಒತ್ತಡಗಳಿಂದಾಗಿ ಅದು 2007 ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್‌ ಜೊತೆಗೆ ವಿಲೀನಗೊಳ್ಳುವಂತಾಯಿತು.

ಮುಂದೆ ಡೆಕನ್‌ 360 ಬ್ರ್ಯಾಂಡ್ ಅಡಿಯಲ್ಲಿ ಡೆಕನ್‌ ಕಾರ್ಗೋ ಅಂಡ್‌ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಹೆಸರಿನಲ್ಲಿ ದೇಶ ಮತ್ತು ವಿದೇಶಗಳಲ್ಲಿ ಸರಕು ಸಾಗಣೆ ಸೇವೆ ನೀಡುವ ಉದ್ದೇಶದಿಂದ ಸ್ಥಾಪಿಸಿದ್ದರು.  ಇದು 2009ರಲ್ಲಿ ಕಡಿಮೆ ವೆಚ್ಚದಲ್ಲಿ ಸಣ್ಣ ನಗರಗಳಿಗೆ ವಿಮಾನದ ಮೂಲಕ ಸರಕು ಸಾಗಣೆಗೆ ಮುಂದಾಗಿತ್ತು. ಮಹಾರಾಷ್ಟ್ರದ ನಾಗಪುರದಲ್ಲಿ ಕಂಪೆನಿಯ ಕೇಂದ್ರ ಕಚೇರಿ ಇತ್ತು. 25 ದಶಲಕ್ಷ ಡಾಲರ್‌ ಹೂಡಿಕೆ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳ ಹೊರತಾಗಿಯೂ ಕಂಪೆನಿ ಕಾರ್ಯಾಚರಣೆ ಮತ್ತು ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಹೆಣಗಲಾರಂಭಿಸಿತು.

ಹೆಚ್ಚುತ್ತಿರುವ ನಷ್ಟ, ಕಳಪೆ ಮಾರುಕಟ್ಟೆ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಅಸಮರ್ಥತೆಗಳಿಂದಾಗಿ 2011 ರ ಹೊತ್ತಿಗೆ ಡೆಕನ್‌ 360 ಕಾರ್ಯಾಚರಣೆ  ನಿಲ್ಲಿಸಿತು. ಕಾರ್ಗೋ ಏರ್‌ಲೈನ್ ಬ್ಲೂ ಡಾರ್ಟ್ ಮತ್ತು ಡಿಎಚ್‌ಎಲ್‌ನಂತಹ ಈಗಾಗಲೇ ಸುಪರಿಚಿತವಾಗಿರುವ ಕಂಪೆನಿಗಳಿಂದ ಕಠಿಣ ಸ್ಪರ್ಧೆಯನ್ನು ಡೆಕ್ಕನ್‌ ಕಾರ್ಗೋ ಎದುರಿಸಿತು.  ಜೊತೆಗೆ ತನ್ನ ಸೇವೆ ಮುಂದುವರೆಸಲು ಪೂರಕ ಬಂಡವಾಳ  ಸಂಗ್ರಹಿಸುವಲ್ಲಿಯೂ  ಸವಾಲು ಎದುರಿಸಿತು. ವ್ಯಾಪಾರವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ವಿಫಲಗೊಂಡಿದ್ದರಿಂದ ಇದು ಕೂಡ ನೆಲಕಚ್ಚಿತು.