ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ(ಎಐ) ಚಾಟ್‌ಬಾಟ್‌ಗಳ ಪ್ರತಿಕ್ರಿಯೆಗಳು ನ್ಯಾಯಾಲಯದಲ್ಲಿ ಕಾನೂನು ಅಥವಾ ವಾಸ್ತವಿಕ ಪ್ರಕರಣಗಳ ನಿರ್ಣಯಕ್ಕೆ ಆಧಾರವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕ್ರಿಶ್ಚಿಯನ್ ಲೌಬೌಟಿನ್ ಸಾಸ್ ಮತ್ತಿತರರು ಹಾಗೂ ದ ಶೂ ಬೊಟಿಕ್ – ಶುಟಿಕ್ ನಡುವಣ ಪ್ರಕರಣ].
ಮಾನವ ಬುದ್ಧಿಮತ್ತೆಗೆ ಅಥವಾ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಮಾನವೀಯ ವಿಚಾರಗಳಿಗೆ ಚಾಟ್‌ಜಿಪಿಟಿ ಬದಲಿ ಆಗಲು ಸಾಧ್ಯವಿಲ್ಲ. ಹೆಚ್ಚೆಂದರೆ ಇದು ಪ್ರಾಥಮಿಕ ತಿಳುವಳಿಕೆಗಾಗಿ ಅಥವಾ ಪ್ರಾಥಮಿಕ ಸಂಶೋಧನೆಗಾಗಿ ಬಳಸಬಹುದಾದ ಸಾಧನವೇ ವಿನಾ ಬೇರೇನೂ ಅಲ್ಲ ಎಂದು ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ಹೇಳಿದ್ದಾರೆ.
ಚಾಟ್‌ಜಿಪಿಟಿಯಂತಹ ಬೃಹತ್ ಭಾಷಾ ಮಾದರಿ (ಎಲ್‌ಎಲ್‌ಎಂ) ಆಧಾರಿತ ಚಾಟ್‌ಬಾಟ್‌ಗಳ ಪ್ರತಿಕ್ರಿಯೆಯು ಬಳಕೆದಾರರು ಕೇಳುವ ಪ್ರಶ್ನೆಯ ಸ್ವರೂಪ, ರಚನೆ, ತರಬೇತಿ ದತ್ತಾಂಶ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು ತಪ್ಪಾದ ಪ್ರತಿಕ್ರಿಯೆ ಹಾಗೂ ಕಾಲ್ಪನಿಕ ಪ್ರಕರಣಗಳನ್ನು ಅವು ಉದ್ಗರಿಸುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹುಟ್ಟುಹಾಕಿದ ದತ್ತಾಂಶದ ನಿಖರತೆ ಮತ್ತು ವಿಶ್ವಾಸಾರ್ಹತೆ ಇನ್ನೂ ಶಂಕಾಸ್ಪದ ವಲಯದಲ್ಲಿದೆ. ತಾಂತ್ರಿಕ ಅಭಿವೃದ್ಧಿಯ ಪ್ರಸ್ತುತ ಹಂತಕ್ಕೆ ಸಂಬಂಧಿಸಿದಂತೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾನವ ಬುದ್ಧಿಮತ್ತೆಯನ್ನು ಅಥವಾ ತೀರ್ಪು ಪ್ರಕ್ರಿಯೆಯಲ್ಲಿ ಮಾನವೀಯ ಅಂಶವನ್ನು ಬದಲಿಸಲು ಸಾಧ್ಯವಿಲ್ಲ ಎಂಬ ಕುರಿತು ನ್ಯಾಯಾಲಯದ ಮನಸ್ಸಿನಲ್ಲಿ ಯಾವುದೇ ಸಂದೇಹವಿಲ್ಲ. ಹೆಚ್ಚೆಂದರೆ ಎಂದರೆ ಇದು ಪ್ರಾಥಮಿಕ ತಿಳುವಳಿಕೆಗಾಗಿ ಅಥವಾ ಪ್ರಾಥಮಿಕ ಸಂಶೋಧನೆಗಾಗಿ ಬಳಸಬಹುದಾದ ಸಾಧನವಾಗಿದೆಯೇ ವಿನಾ ಬೇರೇನೂ ಅಲ್ಲ” ಎಂದು ನ್ಯಾ. ಸಿಂಗ್ ಹೇಳಿದರು.
ಕೆಂಪು ತಳಭಾಗ (ಸೋಲ್) ಮತ್ತು ಮೊನಚು ಶೂ ಶೈಲಿಗೆ ಹೆಸರಾದ ಫ್ರೆಂಚ್ ಪಾದರಕ್ಷೆ ಮತ್ತು ಪರಿಕರಗಳ ಕಂಪನಿ ʼಕ್ರಿಶ್ಚಿಯನ್ ಲೌಬೌಟಿನ್ʼ ಸಲ್ಲಿಸಿದ್ದ ಅರ್ಜಿಯನ್ನು ಆಲಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 'ದಿ ಶೂ ಬೊಟಿಕ್ - ಶೂಟಿಕ್' ಹೆಸರಿನ ಸಂಸ್ಥೆಯು ಭಾರತದ ಹಲವಾರು ನಗರಗಳಲ್ಲಿ ತಾನು ವಿನ್ಯಾಸಗೊಳಿಸಿದಂತದ್ದೇ ಶೂಗಳನ್ನು ತಯಾರಿಸಿ ಪ್ರದರ್ಶಿಸುತ್ತಿದೆ ಎಂದು ಲೌಬೌಟಿನ್ ಆರೋಪಿಸಿತ್ತು.
ಇತ್ತ ಕ್ರಿಶ್ಚಿಯನ್ ಲೌಬೌಟಿನ್ ಪರ ವಕೀಲರು ವಾದ ಮಂಡಿಸುತ್ತಾ ಲೌಬೌಟಿನ್‌ನ ಖ್ಯಾತಿಯನ್ನು ಚಾಟ್‌ಜಿಪಿಟಿ ಮೂಲಕವೂ ಅಳೆಯಬಹುದು ಎಂದರು. ಚಾಟ್‌ಜಿಪಿಟಿಯನ್ನು ಪ್ರಶ್ನಿಸಿದಾಗ ಶೂಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಇರುವ ಹಲವಾರು ಬ್ರ್ಯಾಂಡ್‌ಗಳಲ್ಲಿ ಇದೂ ಒಂದು ಎಂದು ಹೇಳಿದ್ದನ್ನು ನ್ಯಾಯಾಲಯ ಗಮನಿಸಿತು. ಅಂತಹ ಬ್ರಾಂಡ್‌ಗಳ ಹೆಸರನ್ನು ನ್ಯಾಯಾಲಯ ಕೇಳಿದಾಗ, ಅದು ಲೌಬೌಟಿನ್ ಸೇರಿದಂತೆ ಹತ್ತು ಕಂಪೆನಿಗಳ ಹೆಸರನ್ನು ನೀಡಿತು.
ಶೂಟಿಕ್‌ಗೆ ದಂಡ
ಮೊಕದ್ದಮೆಯಲ್ಲಿ ಎತ್ತಿದ ಸಮಸ್ಯೆಗಳ ಆಧಾರದಲ್ಲಿ, ನ್ಯಾಯಾಲಯವು ಫಿರ್ಯಾದುದಾರ ಕ್ರಿಶ್ಚಿಯನ್ ಲೌಬೌಟಿನ್‌ನ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಪ್ರತಿವಾದಿ ಕಂಪೆನಿ ಶೂಟಿಕ್ ನಕಲಿಸಿದೆ ಎಂದು ತೀರ್ಮಾನಿಸಿತು. ಜೊತೆಗೆ ಫಿರ್ಯಾದುದಾರರ ಯಾವುದೇ ವಿನ್ಯಾಸಗಳನ್ನು ನಕಲಿಸುವುದಿಲ್ಲ ಇಲ್ಲವೇ ಅನುಕರಿಸುವುದಿಲ್ಲ ಎನ್ನುವ ಶೂಟಿಕ್‌ನ ಮುಚ್ಚಳಿಕೆಯನ್ನು ಅದು ದಾಖಲಿಸಿತು.
ಈ ಮುಚ್ಚಳಿಕೆಯನ್ನು ಉಲ್ಲಂಘಿಸಿದರೆ ರೂ.25 ಲಕ್ಷ ಮೊತ್ತವನ್ನು ದಂಡವಾಗಿ ಶೂಟಿಕ್ ಪಾವತಿಸಬೇಕು. ಅಲ್ಲದೆ ಖ್ಯಾತನಾಮರ ಛಾಯಾಚಿತ್ರಗಳನ್ನು ಬಳಸಿ ಶೂ ಮಾರಾಟ ಮಾಡಿದ್ದಕ್ಕಾಗಿ ಲೌಬೌಟಿನ್‌ಗೆ ಶೂಟಿಕ್ ರೂ 2 ಲಕ್ಷ ಮೊತ್ತವನ್ನು ನಾಲ್ಕು ವಾರಗಳಲ್ಲಿ ನೀಡಬೇಕು. ಜೊತೆಗೆ ನ್ಯಾಯಾಲಯ ಶುಲ್ಕದ 50% ರಷ್ಟು ಮರುಪಾವತಿಯನ್ನು ಫಿರ್ಯಾದುದಾರರಿಗೆ ಅದು ನೀಡಬೇಕು ಎಂದು ಸೂಚಿಸಿತು.