High Court of Karnataka 
ಸುದ್ದಿಗಳು

ಹಿರಿಯ ನಾಗರಿಕರಿಗೆ ರೈಲು ಟಿಕೆಟ್‌ನಲ್ಲಿ ವಿನಾಯತಿ ಮರುನೀಡಿಕೆಗೆ ಕೋರಿದ್ದ ಪಿಐಎಲ್‌ ವಿಚಾರಣೆಗೆ ಹೈಕೋರ್ಟ್‌ ನಕಾರ

ರೈಲು ಪ್ರಯಾಣ ದರ ಎಷ್ಟಿರಬೇಕು, ನಿರ್ದಿಷ್ಟ ವರ್ಗಕ್ಕೆ ವಿನಾಯಿತಿ ನೀಡಬೇಕೇ, ಬೇಡವೇ ಎಂಬುದು ನೀತಿಯ ಭಾಗವಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದ ನ್ಯಾಯಾಲಯ.

Bar & Bench

ರೈಲು ಟಿಕೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಹಿಂದೆ ವಿನಾಯಿತಿ ನೀಡಲಾಗುತ್ತಿದ್ದನ್ನು ಅದನ್ನು ಮರಳಿ ನೀಡುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಪರಿಹಾರ ಸೂಚಿಸಲು ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಹುಬ್ಬಳ್ಳಿಯವರಾದ ಮನೋವಿಜ್ಞಾನಿ ವಿನೋದ್‌ ಜಿ ಕುಲಕರ್ಣಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ಹಿಂಪಡೆಯಲು ಅನುಮತಿಸಿತು.

ರೈಲು ಪ್ರಯಾಣ ದರ ಎಷ್ಟಿರಬೇಕು, ನಿರ್ದಿಷ್ಟ ವರ್ಗಕ್ಕೆ ವಿನಾಯಿತಿ ನೀಡಬೇಕೆ ಎಂಬುದು ನೀತಿಯ ಭಾಗವಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು. ಇದು ಕಾರ್ಯಾಂಗದ ಭಾಗವಾಗಿರುವುದರಿಂದ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಹಲವು ಸುಪ್ರೀಂ ಕೋರ್ಟ್‌ ಹೇಳಿದೆ. ಚುನಾಯಿತ ಪ್ರತಿನಿಧಿಗಳಿಗೆ ನೀವು ಕೋರಿಕೆ ಸಲ್ಲಿಸಬಹುದು ಎಂದಿತು.

ಪಾರ್ಟಿ ಇನ್‌ ಪರ್ಸನ್‌ ಆದ ವಿನೋದ್‌ ಕುಲಕರ್ಣಿ ಅವರು 2020ರಲ್ಲಿ ಕೇಂದ್ರ ಸರ್ಕಾರವು ವಿನಾಯಿತಿ ಹಿಂಪಡೆದಿರುವುದರಿಂದ ಹಿರಿಯ ನಾಗರಿಕಗೆ ಸಮಸ್ಯೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಆಗ ಪೀಠವು ಈ ಸಂಬಂಧ ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸಿದ್ದೀರಾ. ಚುನಾಯಿತ ಪ್ರತಿನಿಧಿಗಳು ಸೂಕ್ತ ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಲು ಸಾಧ್ಯವಿದೆ ಎಂದಿತು. ಅಂತಿಮವಾಗಿ ಅರ್ಜಿ ಹಿಂಪಡೆಯಲು ಅನುಮತಿಸಿತು.