ವಾಟ್ಸಾಪ್‌ನ ನವೀಕೃತ ಗೌಪ್ಯತಾ ನೀತಿಯು ಮಾಹಿತಿ ತಂತ್ರಜ್ಞಾನ ನಿಯಮಗಳು 2011 ಅನ್ನು ಉಲ್ಲಂಘಿಸುತ್ತಿದ್ದು, ಹೈಕೋರ್ಟ್ ಅಂತಿಮವಾಗಿ ನೀತಿಯ ಸಿಂಧುತ್ವವನ್ನು ನಿರ್ಧರಿಸುವವರೆಗೆ ಅದನ್ನು ಜಾರಿಗೊಳಿಸದಂತೆ ತಡೆಯಬಹುದಾಗಿದೆ ಎಂದು ಗುರುವಾರ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ (ಡಾ. ಸೀಮಾ ಸಿಂಗ್ ವರ್ಸಸ್ ಭಾರತ ಸರ್ಕಾರ). ಈ ಸಂಬಂಧ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಮಾರ್ಚ್ 18ರಂದು ಅಫಿಡವಿಟ್ ಸಲ್ಲಿಸಿದೆ.
“ಜನವರಿ 4, 2021ರಂದು ಹೊರಡಿಸಲಾಗಿರುವ ಹಾಗೂ ಫೆಬ್ರವರಿ 8, 2021ರಿಂದ ಅನುಷ್ಠಾನಗೊಳಿಸಲು ಮುಂದಾದ ವಾಟ್ಸಾಪ್ ನ ನೂತನ ಗೌಪ್ಯತಾ ನೀತಿ ಮತ್ತು ಸೇವಾ ನಿಯಮಗಳನ್ನು ನಿರ್ಬಂದಿಸಬಹುದಾಗಿದ್ದು, ಅಂತಿಮವಾಗಿ ಇದು ಹೈಕೋರ್ಟ್‌ನ ಆದೇಶಕ್ಕೆ ಒಳಪಟ್ಟಿರುತ್ತದೆ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ವಾಟ್ಸಾಪ್ ತನ್ನ ನವೀಕೃತಾ ಗೌಪ್ಯತಾ ನೀತಿಯನ್ನು ಹಿಂಪಡೆಯಬೇಕು. ಇಲ್ಲವೇ ಅದರಿಂದ ಹಿಂದೆ ಸರಿಯಲು ಅವಕಾಶ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರವು ವಾಟ್ಸಾಪ್‌ಗೆ ಆದೇಶ ಮಾಡಬೇಕು ಎಂದು ಕೋರಿ ಡಾ. ಸೀಮಾ ಸಿಂಗ್, ಮೇಘನಾ ಮತ್ತು ವಿಕ್ರಮ್ ಸಿಂಗ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರವು ಅಫಿಡವಿಟ್ ಸಲ್ಲಿಸಿದೆ.
ಸಂವಿಧಾನದ 21ನೇ ವಿಧಿಯಡಿ ಕಲ್ಪಿಸಲಾಗಿರುವ ಖಾಸಗಿ ಹಕ್ಕನ್ನು ನವೀಕೃತ ಗೌಪ್ಯತಾ ನೀತಿಯು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ನವೀಕೃತ ಗೌಪ್ಯತಾ ನೀತಿಯು ಮಾಹಿತಿ ತಂತ್ರಜ್ಞಾನ (ಸಮಂಜಸವಾದ ಭದ್ರತಾ ನಿಯಮಗಳು ಮತ್ತು ಕಾರ್ಯವಿಧಾನಗಳು ಮತ್ತು ಸೂಕ್ಷ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿ) ನಿಯಮಗಳು 2011 ಅನ್ನು ಕೆಳಗಿನ ಐದು ಸಂದರ್ಭಗಳಲ್ಲಿ ಉಲ್ಲಂಘಿಸುತ್ತದೆ ಎಂದು ಕೇಂದ್ರ ಸರ್ಕಾರವು ಅಫಿಡವಿಟ್‌ನಲ್ಲಿ ತಿಳಿಸಿದೆ. ಅವುಗಳು ಇಂತಿವೆ.
ಯಾವ ವಿಧದ ವೈಯಕ್ತಿಕ ದತ್ತಾಂಶ ಸಂಗ್ರಹಿಸಲಾಗುತ್ತದೆ ಎಂಬುದನ್ನು ತಿಳಿಸಲು ಅದು ವಿಫಲವಾಗಿದೆ;
ಸೂಕ್ಷ್ಮ ವೈಯಕ್ತಿಕ ಮಾಹಿತಿಯ ಸಂಗ್ರಹದ ಬಳಕೆದಾರರ ವಿವರಗಳನ್ನು ತಿಳಿಸಲು ವಿಫಲವಾಗಿದೆ;
ಮಾಹಿತಿಯನ್ನು ಪರಿಶೀಲಿಸಲು ಅಥವಾ ತಿದ್ದುಪಡಿ ಮಾಡಲು ಆಯ್ಕೆಯನ್ನು ಒದಗಿಸಲು ವಿಫಲವಾಗಿದೆ;
ಹಿಂದಿನ ಬಾರಿ ಒಪ್ಪಿಗೆಯನ್ನು ಹಿಂಪಡೆಯುವ ಆಯ್ಕೆಯನ್ನು ಒದಗಿಸಲು ವಿಫಲವಾಗಿದೆ;
ಮೂರನೇ ವ್ಯಕ್ತಿಗಳು ಮತ್ತಷ್ಟು ಬಹಿರಂಗಪಡಿಸದಿರುವುದನ್ನು ಖಾತರಿಪಡಿಸುವಲ್ಲಿ ವಿಫಲವಾಗಿದೆ.