ತನ್ನ ಬಂಧನದ ಕಾರಣವನ್ನು ತಿಳಿಯುವುದು ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ [ವಿಹಾನ್ ಕುಮಾರ್ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ]
ತನಿಖಾಧಿಕಾರಿ ಬಂಧನದ ಕಾರಣ ತಿಳಿಸದೆ ಹೋದರೆ ಸಂವಿಧಾನದ 22(1) ನೇ ವಿಧಿಯ ಉಲ್ಲಂಘನೆಯಾಗಲಿದ್ದು ಬಂಧನ ಅಮಾನ್ಯವಾಗುತ್ತದೆ. ಇದರಿಂದ ಕ್ರಿಮಿನಲ್ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ನೀಡುವ ಆದೇಶಗಳೂ ದುರ್ಬಲಗೊಳ್ಳುತ್ತವೆ ಎಂದು ನ್ಯಾಯಾಲಯ ನುಡಿದಿದೆ.
ಯಾವುದೇ ಶಾಸನಬದ್ಧ ನಿರ್ಬಂಧಗಳಿದ್ದರೂ ತನಿಖಾಧಿಕಾರಿ ಬಂಧನದ ಕಾರಣ ತಿಳಿಸದೆ ಇರುವುದು ಆರೋಪಿಗಳಿಗೆ ಜಾಮೀನು ಪಡೆಯಲು ಅರ್ಹತೆ ನೀಡುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
"ವಿಧಿ 22(1)ರ ಉಲ್ಲಂಘನೆ ಸಾಬೀತಾದಾಗ, ಆರೋಪಿಯನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸುವುದು ನ್ಯಾಯಾಲಯದ ಕರ್ತವ್ಯ. ಜಾಮೀನು ಮಂಜೂರು ಮಾಡುವ ಕುರಿತು ಶಾಸನಬದ್ಧ ನಿರ್ಬಂಧಗಳಿದ್ದರೂ ಕೂಡ ಜಾಮೀನು ನೀಡಲು ಅದು ಆಧಾರವಾಗಿರುತ್ತದೆ. ಸಂವಿಧಾನದ 21 ಮತ್ತು 22ನೇ ವಿಧಿಗಳ ಉಲ್ಲಂಘನೆ ಸಾಬೀತಾದಾಗ ಶಾಸನಬದ್ಧ ನಿರ್ಬಂಧಗಳು ಜಾಮೀನು ನೀಡುವ ನ್ಯಾಯಾಲಯದ ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಪೀಠ ವಿವರಿಸಿದೆ.
ಬಂಧನದ ಕಾರಣಗಳನ್ನು ಆದಷ್ಟು ಬೇಗ ತಿಳಿಯುವುದು ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು.ಸುಪ್ರೀಂ ಕೋರ್ಟ್
ಬಂಧಿತ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ರಿಮಾಂಡ್ ಕೋರಿ ಹಾಜರುಪಡಿಸಿದಾಗ, ವಿಧಿ 22(1) ಅನ್ನು ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ನ್ಯಾಯಾಧೀಶರ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಹೇಳಿದೆ.
ವಿಧಿ 22(1)ನ್ನು ಪಾಲಿಸದಿದ್ದರೆ, ಬಂಧನ ಕಾನೂನುಬಾಹಿರವಾಗಲಿದ್ದು ಆ ವ್ಯಕ್ತಿಯನ್ನು ಬಂಧನದಲ್ಲಿರಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಆದರೆ ಈ ಬಂಧನ ಕಾನೂನುಬಾಹಿರ ಎಂದೆನಿಸಿದರೂ ಸಹ ಅದು ಪ್ರಕರಣದ ತನಿಖೆ, ಆರೋಪಪಟ್ಟಿ ಹಾಗೂ ವಿಚಾರಣೆಯನ್ನು ದುರ್ಬಲಗೊಳಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ಸಂವಿಧಾನದ 21 ಮತ್ತು 22ನೇ ವಿಧಿಗಳ ಉಲ್ಲಂಘನೆ ಸಾಬೀತಾದಾಗ ಜಾಮೀನು ನೀಡುವ ಅಧಿಕಾರದ ಮೇಲೆ ಶಾಸನಬದ್ಧ ನಿರ್ಬಂಧಗಳು ಪರಿಣಾಮ ಬೀರುವುದಿಲ್ಲ.ಸುಪ್ರೀಂ ಕೋರ್ಟ್
ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ನಕಲಿ ದಾಖಲೆ ಸೃಷ್ಟಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತನಾದ ವ್ಯಕ್ತಿಗೆ ನ್ಯಾಯಾಲಯ ಪರಿಹಾರ ನೀಡುವ ವೇಳೆ ಈ ತೀರ್ಪು ಪ್ರಕಟಿಸಿತು. ಕಾನೂನಿನ ಪ್ರಕಾರ 24 ಗಂಟೆಗಳ ಒಳಗೆ ತನ್ನ ಬಂಧನಕ್ಕೆ ಕಾರಣಗಳನ್ನು ತಿಳಿಸಿಲ್ಲ ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರುಪಡಿಸಲಿಲ್ಲ. ಅಲ್ಲದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ತನ್ನನ್ನು ಕೈಕೋಳ ಹಾಕಿ ಆಸ್ಪತ್ರೆಯ ಹಾಸಿಗೆಗೆ ಸರಪಳಿಯಿಂದ ಬಂಧಿಸಲಾಗಿತ್ತು ಎಂದು ಆರೋಪಿ ದೂರಿದ್ದರು.
ಈ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ ನಂತರ, ಆರೋಪಿ ಪರಿಹಾರ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಆರೋಪಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ದೂರುದಾರರ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]