Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench 
ಸುದ್ದಿಗಳು

ನಿವೃತ್ತ ಸಿವಿಲ್, ಜಿಲ್ಲಾ ನ್ಯಾಯಾಧೀಶರನ್ನು ಸಾರಿಗೆ ನಿಗಮಗಳು ತನಿಖಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಬಹುದು: ಹೈಕೋರ್ಟ್‌

Bar & Bench

ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಿವೃತ್ತ ಸಿವಿಲ್, ಜಿಲ್ಲಾ ನ್ಯಾಯಾಧೀಶರನ್ನು ಅಥವಾ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಇಕೆಆರ್‌ಟಿಸಿ) ಸಿಬ್ಬಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಆ ಮೂಲಕ ಎನ್‌ಇಕೆಆರ್‌ಟಿಸಿ ಕ್ರಮವನ್ನು ಎತ್ತಿಹಿಡಿದು, ಅರ್ಜಿ ವಜಾಗೊಳಿಸಿದೆ.

“ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ (ನಡವಳಿಕೆ ಮತ್ತು ಶಿಸ್ತು) ನಿಯಮಾವಳಿ 1971ರ ನಿಯಮ 23(2)ರಲ್ಲಿ ಪ್ರಾಧಿಕಾರ (ಅಥಾರಿಟಿ) ಎನ್ನುವ ಪದ ಬಳಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ  ಕೆಎಸ್‌ಆರ್‌ಟಿಸಿಯ ಅಧಿಕಾರಿಯನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಬಾರದು ಎಂದೇನೂ ಇಲ್ಲ" ಎಂದು ಪೀಠ ಹೇಳಿದೆ.

“ನಿಯಮಗಳಲ್ಲಿ ಅಥಾರಿಟಿ ಪದದ ವ್ಯಾಖ್ಯಾನ ನೀಡಲಾಗಿದ್ದರೂ ಸಹ ತನಿಖಾ ಪ್ರಾಧಿಕಾರಿ ಇಂಥವರೇ ಇರಬೇಕು ಎಂದು ನಿರ್ದಿಷ್ಟವಾಗಿ ವ್ಯಾಖ್ಯಾನಿಸಿಲ್ಲ. ಹೀಗಾಗಿ, ಶಿಸ್ತು ಉಲ್ಲಂಘನೆ ಪ್ರಕರಣಗಳಲ್ಲಿ ಯಾರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಬೇಕೆಂಬ ವಿವೇಚನಾಧಿಕಾರ ಶಿಸ್ತು ಪ್ರಾಧಿಕಾರಕ್ಕೆ ಇದ್ದೇ ಇರುತ್ತದೆ, ಆ ಪ್ರಾಧಿಕಾರ ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೆ, ನ್ಯಾಯಾಲಯವು ಎನ್‌ಇಕೆಆರ್‌ಸಿಟಿ ವಾದವನ್ನು ಎತ್ತಿಹಿಡಿದು ನಿಯಮಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಅಥವಾ ಕಾನೂನು ವೃತ್ತಿಪರರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕ ಮಾಡಲು ಅವಕಾಶವಿದೆ ಎಂದು ಹೇಳಿದೆ.

ಶಿಸ್ತು ಪ್ರಕ್ರಿಯೆ ಕುರಿತಾದ ಪ್ರಕರಣವೊಂದರಲ್ಲಿ ನಿವೃತ್ತ ಸಿವಿಲ್ ಮತ್ತು ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಿದ್ದನ್ನು ಮತ್ತು ಆನಂತರ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು.

Girish and others Vs KSRTC and others.pdf
Preview