ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಾನವನ್ನು ಪ್ರಸ್ತುತ ಇರುವ ವಯೋಮಿತಿಗಿಂತ ಹೆಚ್ಚು ವಿಸ್ತರಿಸಬಾರದು ಎಂದು ನ್ಯಾ. ಎಸ್ ರವೀಂದ್ರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು 65 ವಯೋಮಾನಕ್ಕೆ ನಿವೃತ್ತಿ ಹೊಂದುತ್ತಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳು 62ನೇ ವಯಸ್ಸಿಗೆ ನಿವೃತ್ತರಾಗುತ್ತಿದ್ದಾರೆ.
ಒಂದೊಮ್ಮೆ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಾನವನ್ನು ಇನ್ನೂ ಮೂರು ವರ್ಷ ವಿಸ್ತರಿಸಿ 65ಕ್ಕೆ ನಿಗದಿಪಡಿಸಿದರೂ ಅದರಾಚೆಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಾನವನ್ನು ವಿಸ್ತರಿಸಬಾರದು ಎಂದು ಅವರು ಹೇಳಿದರು. ಭಾರತದ ತೆರಿಗೆ ಪ್ರಪಂಚದ ವಿಕಸನವನ್ನು ದಾಖಲಿಸುವ ಅಸೀಮ್ ಚಾವ್ಲಾ ಅವರ ‘ಫೈಂಡಿಂಗ್ ಎ ಸ್ಟ್ರೈಟ್ ಲೈನ್ ಬಿಟ್ವೀನ್ ಟ್ವಿಸ್ಟ್ಸ್ ಅಂಡರ್ ಟರ್ನ್ಸ್’ ಎನ್ನುವ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂಡಿಯಾ ಹೆಬಿಟೇಟ್ ಸೆಂಟರ್ ಅಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನ್ಯಾಯಮೂರ್ತಿಗಳ ನಿವೃತ್ತಿಯ ವಯೋಮಾನವನ್ನು ವಿಸ್ತರಿಸುವ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ. ಈಗಿರುವುದು ಸಾಕು. ಒಂದೊಮ್ಮೆ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಾನವನ್ನು 65ಕ್ಕೆ ಏರಿಸಿದರೂ ಸಹ ಅದರಾಚೆಗೆ ಖಂಡಿತವಾಗಿಯೂ ವಿಸ್ತರಿಸಬಾರದು. ನಮಗೂ ವಿಶ್ರಾಂತಿ ಬೇಕು,” ಎಂದರು.
ಯುವ ಪೀಳಿಗೆಗೆ ನ್ಯಾಯಪೀಠಗಳಲ್ಲಿ ಸೇವೆಗೈಯುವ, ನ್ಯಾಯದಾನದಲ್ಲಿ ಭಾಗಿಯಾಗುವ ಅವಕಾಶವನ್ನು ಕಲ್ಪಿಸಬೇಕು ಎನ್ನುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ನ್ಯಾಯದಾನ ನೀಡುವಲ್ಲಿ “ಯುವ ಪೀಳಿಗೆಯ ಪಾತ್ರವೂ ಸಾಕಷ್ಟು ಅಗತ್ಯ ಎನ್ನುವುದನ್ನು ನಾವು ಗುರುತಿಸಬೇಕಾದ ಕಾಲ ಬಂದಿದೆ. ಸಮಕಾಲೀನ ವಿದ್ಯಮಾನಗಳ ಕುರಿತಾಗಿ ಅವರು ಮಾಹಿತಿಯ ಸಮಗ್ರತೆಯನ್ನು, ತಾಜಾ ಕುತೂಹಲವನ್ನು ನ್ಯಾಯಪೀಠಕ್ಕೆ ಹೊತ್ತು ತರುತ್ತಾರೆ. ನಮ್ಮಂತಹ ಹಳಬರು ಅನೇಕಬಾರಿ ಇದಕ್ಕೆ ನಿರೋಧಕತೆಯನ್ನು ಹಾಗೂ ಪ್ರತಿರೋಧವನ್ನು ಬೆಳೆಸಿಕೊಂಡಿರುತ್ತೇವೆ,” ಎಂದು ಅವರು ಯುವಪೀಳಿಗೆಯ ವಿಭಿನ್ನ ದೃಷ್ಟಿಕೋನವು ನ್ಯಾಯದಾನದಲ್ಲಿ ಅಗತ್ಯವಾಗುವ ಬಗೆಯನ್ನು ವಿವರಿಸಿದರು.
ತೆರಿಗೆಗೆ ವಿಚಾರಕ್ಕೆ ಸಂಬಂಧಿಸಿದಂತೆ ‘ಸಾಮಾಜಿಕ ನ್ಯಾಯ ಮತ್ತು ವಿತ್ತೀಯ ನೀತಿ’ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಅವರು, ತೆರಿಗೆ ನೀತಿಯು ರಾಜಕೀಯ ಚರ್ಚೆಯ ಕೇಂದ್ರದಲ್ಲಿ ಯಾವುತ್ತೂ ಇದೆ ಎನ್ನುವ ಬಗ್ಗೆ ವಿವರಿಸಿದರು. ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮವು ಹೇಗೆ ಇದರ ಸುತ್ತಲೇ ರೂಪುತಳೆಯಿತು ಎನ್ನುವುದನ್ನು ಉದಾಹರಿಸಿದರು.
“ತೆರಿಗೆ ನೀತಿಯ ಕಾರಣದಿಂದಾಗಿಯೇ ಅಮೆರಿಕದ ಉದಯವಾಯಿತು. ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಒಕ್ಕೊರಲಿನ ಬೇಡಿಕೆಯಾಗಿದ್ದುದು ‘ಪ್ರತಿನಿಧಿತ್ವ ಇಲ್ಲದಿದ್ದರೆ ತೆರಿಗೆಯೂ ಇಲ್ಲ’ (ನೋ ಟ್ಯಾಕ್ಸೇಷನ್ ವಿತೌಟ್ ರೆಪ್ರೆಸೆಂಟೇಷನ್) ಎನ್ನುವುದಾಗಿತ್ತು. ರಾಜಕೀಯ ಪ್ರಾತಿನಿಧ್ಯದ ಬೇಡಿಕೆಯು ತೆರಿಗೆ ನೀತಿಯಿಂದಾಗಿ ಅಲ್ಲಿ ರೂಪುತಳೆಯಿತು” ಎಂದು ವಿವರಿಸಿದರು.
ಅದೇ ರೀತಿ, ಫ್ರೆಂಚ್ ಕ್ರಾಂತಿಯೂ ಸಹ ಶೋಷಣೆಯನ್ನೇ ಗುರಿಯಾಗಿಸಿಕೊಂಡು ಮನಸೋಇಚ್ಛೆ ವಿಧಿಸಿದ್ದ ತೆರಿಗೆಯಿಂದಾಗಿ ಉದ್ಭವಿಸಿದ್ದನ್ನು ಅವರು ನೆನೆದರು. ಯಾವಾಗೆಲ್ಲಾ ಮನಬಂದಂತೆ ತೆರಿಗೆಯನ್ನು ವಿಧಿಸಲಾಗಿದೆಯೋ ಆಗೆಲ್ಲಾ ಸಮಾಜ ಸಿಡಿದೆದ್ದಿದೆ ಎಂದು ಅವರು ಹೇಳಿದರು.