ರಾಜ್ಯದ ನ್ಯಾಯಾಂಗದ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯ ಸಂಗ್ರಹಿಸಿರುವ ಶೇ.75-80ರಷ್ಟಯ ಹಣವನ್ನಾದರೂ ಮರಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮನವಿ ಮಾಡಿದರು.
ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
“ಕಳೆದ ಎರಡು ವರ್ಷಗಳಲ್ಲಿ ಕಲಬುರ್ಗಿ, ಬೆಂಗಳೂರು, ಧಾರವಾಡ ಪೀಠಗಳಲ್ಲಿ 666 ಹುದ್ದೆಗಳ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಅಧಿಕಾರಿಗಳು 238 ಹುದ್ದೆಗಳನ್ನು ಅನುಮೋದಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಪ್ರಸ್ತಾವ ಕಳುಹಿಸಿದಾಗ ಕೇವಲ 400 ಹುದ್ದೆಗಳನ್ನು ಅನುಮೋದಿಸಲಾಗಿದೆ” ಎಂದು ಬೇಸರಿಸಿದರು.
“ಕಳೆದ ಮೂರು ವರ್ಷಗಳಲ್ಲಿ ನ್ಯಾಯಾಲಯದ ಶುಲ್ಕ, ದಂಡ ಮತ್ತು ಸ್ಟಾಂಪ್ ಶುಲ್ಕ ಹೊರತುಪಡಿಸಿ ಜಿಲ್ಲಾ ಮತ್ತು ಹೈಕೋರ್ಟ್ 2023-24ರಲ್ಲಿ 376 ಕೋಟಿ, 2024-25ರಲ್ಲಿ 439 ಕೋಟಿ, 2025-26ರಲ್ಲಿ 470 ಕೋಟಿಯನ್ನು ರಾಜ್ಯ ಸರ್ಕಾರಕ್ಕೆ ವಸೂಲಿ ಮಾಡಿಕೊಟ್ಟಿವೆ. ಆದರೆ, ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ಸರ್ಕಾರವು ನ್ಯಾಯಾಂಗಕ್ಕೆ ಕ್ರಮವಾಗಿ ನೀಡಿರುವುದು 1.03 ಕೋಟಿ, 40 ಲಕ್ಷ ಮತ್ತು 1.37 ಕೋಟಿ, 1.41 ಕೋಟಿ ಮಾತ್ರ. ಇದು ಬಿಡಿಗಾಸುವಲ್ಲ. ನಾವು ಸಂಗ್ರಹಿಸಿರುವ ಶೇ.75-80ರಷ್ಟನ್ನಾದರೂ ಮರಳಿಸಬೇಕು” ಎಂದು ಆಗ್ರಹಿಸಿದರು.
“ಪ್ರತಿವರ್ಷ ವ್ಯಾಜ್ಯಗಳು ಹೆಚ್ಚಾಗುತ್ತಿದ್ದು, 2023ರಲ್ಲಿ 17 ಲಕ್ಷ ಇದ್ದ ವ್ಯಾಜ್ಯಗಳ ಸಂಖ್ಯೆ 2025ರಲ್ಲಿ 22 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಕಾನೂನುಗಳು ಜಾರಿಯಾಗುತ್ತಿದ್ದು, ಅವುಗಳ ಅಡಿ ನ್ಯಾಯದಾನ ಮಾಡಲು ಮೂಲಸೌಕರ್ಯ ಕಲ್ಪಿಸಲು, ನ್ಯಾಯಾಧೀಶರ ನೇಮಕಾತಿ, ಸರ್ಕಾರಿ ಅಭಿಯೋಜಕರ ನೇಮಕಾತಿ, ನ್ಯಾಯಾಲಯಗಳು ಪ್ರಸ್ತಾವ ಕಳುಹಿಸಿದಾಗ ಅಧಿಕಾರಿಗಳು ಮಂದಿಗತಿಯಲ್ಲಿ ಅಥವಾ ಅದರ ಕಡೆ ಗಮನಹರಿಸದೇ ಬೇಡಿಕೆ ಕಡಿತಗೊಳಿಸಿ, ಅನುಮೋದಿಸಿರುವ ಉದಾಹರಣೆಗಳು ಬೇಕಾದಷ್ಟಿವೆ” ಎಂದು ಕರ್ನಾಟಕದವರೇ ಆದ ನ್ಯಾ. ಅರವಿಂದ್ ಕುಮಾರ್ ಬೇಸರಿಸಿದರು.
“ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನ್ಯಾಯಾಲಯ ಕಟ್ಟಡ ಮತ್ತು ನ್ಯಾಯಾಧೀಶರಿಗೆ ನಿವಾಸ ನಿರ್ಮಿಸುವುದು ಅತ್ಯವಶ್ಯಕ. ಸರ್ಕಾರವು ನ್ಯಾಯಾಂಗದ ಅಭಿವೃದ್ಧಿಗೆ ನೀಡಿರುವ ಅನುದಾನ ಅತ್ಯಂತ ಕಡಿಮೆ. ಹೀಗಾಗಿ, ಹೈಕೋರ್ಟ್‌ನಿಂದ ಬರುವ ಪ್ರಸ್ತಾವಗಳನ್ನು ಕಡಿತಗೊಳಿಸದೇ, ತ್ವರಿತವಾಗಿ ಅನುಮೋದಿಸಲು ತಕ್ಷಣ ನಿರ್ದೇಶನ ನೀಡಬೇಕು” ಎಂದು ಕೋರಿದರು.