Karnataka High Court, X 
ಸುದ್ದಿಗಳು

ಟ್ವೀಟ್‌ ನಿರ್ಬಂಧ ಎತ್ತಿ ಹಿಡಿದಿರುವ ಪರಿಶೀಲನಾ ಸಮಿತಿ ಆದೇಶ ಅತಿ ಗೌಪ್ಯ ಎಂದು ಕೇಂದ್ರ ಹೇಳಲಾಗದು: ಎಕ್ಸ್‌ ಕಾರ್ಪ್‌

ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧ ಆದೇಶವನ್ನು ಮರುಪರಿಶೀಲನಾ ಸಮಿತಿ ಎತ್ತಿ ಹಿಡಿದಿರುವುದು ವಾಕ್‌ ಸ್ವಾತಂತ್ರ್ಯಕ್ಕೆ ವೇದಿಕೆ ಕಲ್ಪಿಸುವ ಎಕ್ಸ್‌ ಕಾರ್ಪ್‌ ಹಕ್ಕಿಗೆ ಅಡ್ಡಿಯಾಗಿದೆ ಎಂದು ಹಿರಿಯ ವಕೀಲ ಸಜನ್‌ ಪೂವಯ್ಯ ವಾದಿಸಿದರು.

Bar & Bench

ವ್ಯಕ್ತಿಗತ ಖಾತೆಯ ಟ್ವೀಟ್‌ಗಳನ್ನು ನಿರ್ಬಂಧಿಸಿರುವುದನ್ನು ಎತ್ತಿ ಹಿಡಿದಿರುವ ಕೇಂದ್ರ ಸರ್ಕಾರದ ಮರುಪರಿಶೀಲನಾ ಸಮಿತಿಯ ಆದೇಶವನ್ನು ಬಹಿರಂಗಪಡಿಸಲು ನಿರಾಕರಿಸಿರುವ ಭಾರತ ಸರ್ಕಾರದ ಆದೇಶವನ್ನು ಎಕ್ಸ್‌ ಕಾರ್ಪ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಪ್ರಶ್ನಿಸಿತು.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್‌) ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ಖಾತೆ ನಿರ್ಬಂಧ ಆದೇಶವನ್ನು ಮರುಪರಿಶೀಲನಾ ಸಮಿತಿಯು ಎತ್ತಿ ಹಿಡಿದಿದೆ ಎಂಬ ಅಂಶವು ಕೇಂದ್ರ ಸರ್ಕಾರವು ಸಲ್ಲಿಸಿರುವ ಆಕ್ಷೇಪಣೆಯಿಂದ ತಿಳಿದಿದೆ. ಆದರೆ, ಮರುಪರಿಶೀಲನಾ ಸಮಿತಿಯ ಆದೇಶವನ್ನು ಹಂಚಿಕೊಳ್ಳಲು ನಿರಾಕರಿಸಿರುವ ಭಾರತ ಸರ್ಕಾರವು ಅದು ಅತಿ ಗೌಪ್ಯ ಎನ್ನುತ್ತಿದೆ” ಎಂದು ಆಕ್ಷೇಪಿಸಿದರು.

“(ಮಾಹಿತಿ ತಂತ್ರಜ್ಞಾನ ಕಾಯಿದೆ) ನಿಯಮ 14ರಲ್ಲಿ ಸಕಾರಣ ಉಲ್ಲೇಖಿಸಿಬೇಕು ಎಂದು ಹೇಳಿರುವಾಗ ಮರುಪರಿಶೀಲನಾ ಆದೇಶವು ಅತಿ ಗೌಪ್ಯ ವಿಚಾರ ಹೇಗಾಗುತ್ತದೆ? ಶಾಸನದಲ್ಲಿ (ಕಾರಣಗಳನ್ನು) ಉಲ್ಲೇಖಿಸಬೇಕು ಎಂದು ಹೇಳಲಾಗಿದೆ, ಹೀಗಿರುವಾಗ ಕೇಂದ್ರ ಸರ್ಕಾರ ಅದು ಅತಿ ಗೌಪ್ಯ ಎಂದು ಹೇಗೆ ಹೇಳುತ್ತದೆ” ಎಂದು ಪ್ರಶ್ನಿಸಿದರು.

“ಮರುಪರಿಶೀಲನಾ ಸಮಿತಿಯ ಆದೇಶಗಳನ್ನು ನೀಡದಿದ್ದರೆ ತಮಗೆ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಲು ಕಷ್ಟವಾಗಲಿದೆ. ಕೆಲವು ನಿರ್ಬಂಧ ಬೇಡಿಕೆಗೆ ಸಂಬಂಧಿಸಿದಂತೆ ಮರುಪರಿಶೀಲನಾ ಸಮಿತಿಯು ಎಕ್ಸ್‌ ಕಾರ್ಪ್‌ ಪರವಾಗಿ ಆದೇಶಿಸಿದೆ. ಬೇರೆ ಪ್ರಕರಣದಲ್ಲಿ ಮರುಪರಿಶೀಲನಾ ಸಮಿತಿಯು ನಿರ್ಬಂಧ ಆದೇಶವನ್ನು ಅಂತಿಮವಾಗಿ ಎತ್ತಿ ಹಿಡಿದಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರಬಹುದು” ಎಂದು ಸಂಶಯ ವ್ಯಕ್ತಪಡಿಸಿದರು.

“ವಿವಿಧ 10 ಸಂದರ್ಭದಲ್ಲಿ ಮರುಪರಿಶೀಲನಾ ಸಮಿತಿಯು ಎಕ್ಸ್‌ ಕಾರ್ಪ್‌ ಪರವಾಗಿ ಆದೇಶಿಸಿದ್ದು, ನಿರ್ಬಂಧ ತೆರವು ಮಾಡುವಂತೆ ಸೂಚಿಸಿದೆ. ಆದರೆ, ನಮಗೆ ಮರುಪರಿಶೀಲನಾ ಸಮಿತಿಯ ಆದೇಶವನ್ನು ನೀಡಲಾಗಿಲ್ಲ. ನಾವು ಉದ್ಯಮ ಹೇಗೆ ನಡೆಸಬೇಕು? ನಮ್ಮದು ವಾಕ್‌ ಸ್ವಾತಂತ್ರ್ಯ ಆಧರಿಸಿದ ಉದ್ಯಮವಾಗಿದೆ… ನ್ಯಾಯಾಲಯದ ಮುಂದೆ ಮರುಪರಿಶೀಲನಾ ಆದೇಶವನ್ನು ಇಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದರೆ, ಸಮಿತಿಯ ಆದೇಶವು ನನ್ನ ಪರವಾಗಿರಬಹುದು ಎಂದು ನಾನು ಭಾವಿಸಬಹುದು. ಮರುಪರಿಶೀಲನಾ ಸಮಿತಿಯು 'ನಿರ್ಬಂಧಕ್ಕೆ ಯಾಕೆ ಕಾರಣ ಉಲ್ಲೇಖಿಸಿಲ್ಲ, ಮುಂದಿನ ಬಾರಿ ಕಾರಣ ನೀಡಬೇಕು' ಎಂದಿರಬಹುದು” ಎಂದು ಹೇಳಿದರು.

“ಒಂದು ಸಾಲಿನಲ್ಲಿ 1,500 ಟ್ವೀಟ್‌ ಮಾಹಿತಿ ನಿರ್ಬಂಧಿಸಿ ಎಂದು ಆದೇಶ ಮಾಡಬಹುದೇ ಅಥವಾ ಅದರಲ್ಲಿ ಸಕಾರಣಗಳು ಇರಬೇಕೆ?” ಎಂಬ ವಿಚಾರವನ್ನು ಪೂವಯ್ಯ ಅವರು ಪೀಠದ ಮುಂದೆ ಇಟ್ಟರು. “ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಮ್ಮ ಉದ್ಯಮ ಆಧರಿಸಿದೆ. ಇದು ಹೋದರೆ ನಮ್ಮ ಉದ್ಯಮಕ್ಕೆ ಹಾನಿಯಾಗಲಿದೆ… ವಾಕ್‌ ಸ್ವಾತಂತ್ರ್ಯಕ್ಕೆ ವೇದಿಕೆ ಕಲ್ಪಿಸುವುದಕ್ಕೆ ಹಾನಿ ಮಾಡುತ್ತಿರುವುದು ನಮ್ಮ ಅಹವಾಲಾಗಿದೆ” ಎಂದು ಅವರು ವಾದಿಸಿದರು.

ಅಂತಿಮವಾಗಿ ಮರುಪರಿಶೀಲನಾ ಸಮಿತಿ ಆದೇಶವನ್ನು ನ್ಯಾಯಾಲಯದ ಮುಂದೆ ಇಡಬೇಕೆ ಎಂಬುದು ಸೇರಿದಂತೆ ಎಕ್ಸ್‌ ಕಾರ್ಪ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರವು ಸಮಯ ಕೋರಿತು. ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು. ವ್ಯಕ್ತಿಗತ ಖಾತೆಯ ಟ್ವೀಟ್‌ಗಳನ್ನು ನಿರ್ಬಂಧಿಸಿರುವುದನ್ನು ಎತ್ತಿ ಹಿಡಿದಿರುವ ಕೇಂದ್ರ ಸರ್ಕಾರದ ಮರುಪರಿಶೀಲನಾ ಸಮಿತಿಯ ಆದೇಶವನ್ನು ಬಹಿರಂಗಪಡಿಸಲು ನಿರಾಕರಿಸಿರುವ ಭಾರತ ಸರ್ಕಾರದ ಆದೇಶವನ್ನು ಎಕ್ಸ್‌ ಕಾರ್ಪ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಪ್ರಶ್ನಿಸಿತು.