ಭಾರತದ ಸರ್ವೋಚ್ಚ ನ್ಯಾಯಾಲಯದ ವಾಹನ
ಭಾರತದ ಸರ್ವೋಚ್ಚ ನ್ಯಾಯಾಲಯದ ವಾಹನ 
ಸುದ್ದಿಗಳು

ಲಘು ವಾಹನ ಪರವಾನಗಿದಾರರಿಗೆ 7.5 ಟನ್‌ ತೂಕದ ಸಾರಿಗೆ ವಾಹನ ಓಡಿಸಲು ಅನುಮತಿ: ಜ.17ರೊಳಗೆ ಪರಿಶೀಲಿಸಲು ಸುಪ್ರೀಂ ಗಡುವು

Bar & Bench

ಲಘು ಮೋಟಾರು ವಾಹನಗಳಿಗೆ (ಎಲ್ಎಂವಿ) ಚಾಲನಾ ಪರವಾನಗಿ ಪಡೆದಿರುವವರು 7,500 ಕಿಲೋಗ್ರಾಂ ತೂಕದವರೆಗಿನ ಸಾರಿಗೆ ವಾಹನ ಓಡಿಸಲು ಅನುಮತಿಸುವ ನೀತಿ ಕುರಿತಂತೆ ಜನವರಿ 17ರೊಳಗೆ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಗಡುವು ವಿಧಿಸಿದೆ.

ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರವು ಸಣ್ಣ ತಿದ್ದುಪಡಿಗಳ ಬದಲು ಸಮಗ್ರ ಬದಲಾವಣೆಗೆ ಚಿಂತಿಸುತ್ತಿದೆ ಎಂದು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಫೆಬ್ರವರಿಯಲ್ಲಿ ಸಂಸತ್‌ ಬಜೆಟ್ ಅಧಿವೇಶನ ಇದ್ದು ಅದಕ್ಕೂ ಮೊದಲು ಎಲ್ಲಾ ಸಂಬಂಧಿತ ಸಮಾಲೋಚನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ವಿಮಾ ಕಂಪನಿಗಳ ಕಳವಳವನ್ನು ನ್ಯಾಯಯುತವಾಗಿ ಪರಿಶೀಲಿಸುವ ಉದ್ದೇಶದಿಂದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್‌ ನರಸಿಂಹ,  ಪಂಕಜ್ ಮಿತ್ತಲ್‌ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರಾಕರಿಸಿತು.

ಕಾನೂನಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಪ್ರಕರಣದ ಬಗ್ಗೆ ಮುಕುಂದ್ ದೇವಾಂಗನ್ ಪ್ರಕರಣದಲ್ಲಿ ನೀಡಲಾದ ತೀರ್ಪು ಮೇಲುಗೈ ಸಾಧಿಸುತ್ತದೆ ಎಂದ ನ್ಯಾಯಾಲಯ ಪ್ರಕರಣವನ್ನು ಜನವರಿ 17, 2024ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

ಮುಕುಂದ್ ದೇವಾಂಗನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ 7,500 ಕೆಜಿ ಮೀರದ ಸಾರಿಗೆ ವಾಹನಗಳನ್ನು ಎಲ್ಎಂವಿ ವ್ಯಾಖ್ಯಾನದಿಂದ ಹೊರಗಿಡಲಾಗಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಲಘು ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ಚಾಲನಾ ಪರವಾನಗಿ ಪಡೆದವರು ಆ ಪರವಾನಗಿ ಆಧರಿಸಿ, 7.5 ಟನ್‌ಗಿಂತ ಹೆಚ್ಚು ತೂಗದ ಲಘು ಮೋಟಾರು ವಾಹನ ವರ್ಗದ ಸಾರಿಗೆ ವಾಹನ ಓಡಿಸಲು ಅರ್ಹರೇ? ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು.

ಮೋಟಾರು ವಾಹನ ಕಾಯಿದೆಯ ವಿವಿಧ ನಿಬಂಧನೆಗಳ ಪ್ರಕಾರ, ಎರಡು ವರ್ಗಗಳ ಅಡಿಯಲ್ಲಿ ಪರವಾನಗಿ ಪಡೆಯಲು ಅರ್ಹತೆಯ ವಿಷಯದಲ್ಲಿ ಕೆಲವು ವ್ಯತ್ಯಾಸಗಳಿರುವುದರಿಂದ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 36 ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.