370 ನೇ ವಿಧಿ, ಜಮ್ಮು ಮತ್ತು ಕಾಶ್ಮೀರ ನಕ್ಷೆ ಹಾಗೂ ಸುಪ್ರೀಂ ಕೋರ್ಟ್ 
ಸುದ್ದಿಗಳು

ವಿಧಿ 370 ರದ್ದತಿ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ

ವಿಶೇಷ ಎಂದರೆ, ಸುಪ್ರೀಂ ಕೋರ್ಟ್ ತನ್ನ ಸರ್ವಾನುಮತದ ತೀರ್ಪಿನಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ 2019ರ ಕಾಯಿದೆಯ ಸಿಂಧುತ್ವ ನಿರ್ಧರಿಸಲು ನಿರಾಕರಿಸಿತ್ತು.

Bar & Bench

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸುವುದನ್ನು ಎತ್ತಿಹಿಡಿದಿದ್ದ ಇತ್ತೀಚಿನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಮರುಪರಿಶೀಲನಾ ಅರ್ಜಿದಾರರಲ್ಲೊಬ್ಬರಾದ ಮುಜಾಫರ್ ಇಕ್ಬಾಲ್ ಖಾನ್ ಅವರು ʼಬಾರ್ ಅಂಡ್ ಬೆಂಚ್ʼಗೆ ಈ ಬೆಳವಣಿಗೆಯನ್ನು ದೃಢೀಕರಿಸಿದ್ದಾರೆ.

ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮತ್ತೊಂದು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. 370ನೇ ವಿಧಿ ಪ್ರಕರಣದಲ್ಲಿ ಕೂಡ ಇವರಿಬ್ಬರೂ ಅರ್ಜಿದಾರರಾಗಿದ್ದರು.

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ 2023ರ ಡಿಸೆಂಬರ್ 11ರಂದು ಸರ್ವಾನುಮತದಿಂದ ಎತ್ತಿ ಹಿಡಿದಿತ್ತು. 370ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ನ್ಯಾಯಾಲಯ ತರ್ಕಿಸಿತ್ತು.

370 ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾಯಿದೆಯ ಸಿಂಧುತ್ವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಆಗ ನಿರಾಕರಿಸಿತ್ತು.

ಬದಲಿಗೆ, ಈ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ದಾಖಲಿಸಿಕೊಂಡಿತ್ತು.

ತೀರ್ಪು ಅನೇಕ ಟೀಕೆಗಳಿಗೆ ಗುರಿಯಾಗಿತ್ತು. ಈ ತೀರ್ಪು ತುಂಬಾ ವಿಚಲಿತಗೊಳಿಸುವಂತಿದೆ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಕಾರ್ಯಕ್ರಮವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಅವರ ತಂದೆ, ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಕೂಡ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಧಿ 370 ರದ್ದತಿ ಎತ್ತಿಹಿಡಿದ ಸುಪ್ರೀಂ ತೀರ್ಪಿನಲ್ಲಿ ಭಿನ್ನ ತೀರ್ಪು ಇಲ್ಲದೆ ಹೋದದ್ದು ವಿಷಾದಕರ ಎಂದಿದ್ದರು.