RG Kar Medical College 
ಸುದ್ದಿಗಳು

ವೈದ್ಯೆ ಅತ್ಯಾಚಾರ ಮತ್ತು ಕೊಲೆ: ಹಣಕಾಸು ಅವ್ಯವಹಾರ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಾಜಿ ಪ್ರಾಂಶುಪಾಲ

Bar & Bench

ತರಬೇತಿ ಪಡೆಯುತ್ತಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಸುದ್ದಿಗೆ ಗ್ರಾಸವಾಗಿದ್ದ ಕಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂಬ ಕಲ್ಕತ್ತಾ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಆಪಾದಿತ ಅತ್ಯಾಚಾರ ಮತ್ತು ಕೊಲೆ ಘಟನೆ ಮತ್ತು ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].

ಅತ್ಯಾಚಾರ ಮತ್ತು ಕೊಲೆ ನಡೆದಿದ್ದ ಆಸ್ಪತ್ರೆಯ ಹಣಕಾಸು ಅವ್ಯವಹಾರ ಕುರಿತಂತೆ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ ಆಗಸ್ಟ್ 23ರಂದು ಸಿಬಿಐಗೆ ಆದೇಶಿಸಿತ್ತು.  ಇದನ್ನು ಡಾ. ಘೋಷ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಆಗಸ್ಟ್ 9 ರಂದು ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಶವವಾಗಿ ಪತ್ತೆಯಾದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಘಟನೆ ದೇಶದಾದ್ಯಂತ ಪ್ರತಿಭಟನೆ, ಆಕ್ರೋಶಗಳಿಗೆ ಕಾರಣವಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತಾ ಹೈಕೋರ್ಟ್‌ ಘಟನೆಯನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಆದೇಶಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ಘೋಷ್‌ ಅವರನ್ನು ತಕ್ಷಣವೇ ರಾಜ್ಯ ಸರ್ಕಾರ ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಮರು-ನೇಮಕ ಮಾಡಿತ್ತು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕಲ್ಕತ್ತಾ ಹೈಕೋರ್ಟ್‌ ಅಷ್ಟು ತರಾತುರಿಯಲ್ಲಿ ಅವರನ್ನು ಮರು ನೇಮಕ ಮಾಡುವ ಅಗತ್ಯದ ಬಗ್ಗೆ ಪ್ರಶ್ನಿಸಿತ್ತು. ತರುವಾಯ ಡಾ. ಘೋಷ್‌ ದೀರ್ಘ ರಜೆ ಮೇಲೆ ತೆರಳಿದ್ದರು.

ಆದರೆ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ ಆಗಸ್ಟ್ 23ರಂದು ಸಿಬಿಐಗೆ ಆದೇಶಿಸಿತು.   

ಡಾ. ಘೋಷ್ ಅವರು ಪ್ರಾಂಶುಪಾಲರಾಗಿದ್ದಾಗ ಅವರು ಎಸಗಿದ್ದಾರೆನ್ನಲಾದ ಗಂಭೀರ ಅಕ್ರಮಗಳಿಗೆ ಸಂಬಂಧಿಸಿದಂತೆ ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ ಈ ಆದೇಶ ನೀಡಿತ್ತು.