ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಘಟಿಸಿದ್ದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಕೊಲ್ಕತ್ತಾದ ವಿಚಾರಣಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗೆ ಮರಣದಂಡನೆ ವಿಧಿಸಲು ಕೋರಿದ್ದ ಪ್ರಾಸಿಕ್ಯೂಷನ್‌ನ ಮನವಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ತಿರಸ್ಕರಿಸಿದರು. ಮರಣದಂಡನೆ ವಿಧಿಸಲು ಅಗತ್ಯವಾದ "ಅಪರೂಪದಲ್ಲಿ ಅಪರೂಪ"ದ ಅಪರಾಧ ಎನ್ನುವ ವರ್ಗೀಕರಣದಡಿ ಪ್ರಸಕ್ತ ಪ್ರಕರಣ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಇದೇ ವೇಳೆ ನ್ಯಾಯಾಲಯವು, ಮೃತರ ಕುಟುಂಬಕ್ಕೆ ₹17 ಲಕ್ಷ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿತು.
57 ದಿನಗಳ ಕಾಲ ನಡೆದ ಗೌಪ್ಯ ವಿಚಾರಣೆ ನಡೆಸಿದ ನ್ಯಾಯಾಲಯವು ಜನವರಿ 18 ರಂದು ಸಂಜಯ್ ರಾಯ್‌ನನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿತ್ತು. ನಂತರ ರಾಯ್‌ಗೆ ವಿಧಿಸುವ ಶಿಕ್ಷೆಯನ್ನು ನಿರ್ಧರಿಸುವ ವಿಷಯವನ್ನು ಸೋಮವಾರಕ್ಕೆ ಮುಂದೂಡಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ರಾಯ್‌ಗೆ ಮರಣದಂಡನೆ ವಿಧಿಸಲು ಕೋರಿತ್ತು.
ಹಿನ್ನೆಲೆ: ಪ್ರಕರಣವು ಆಗಸ್ಟ್ 9, 2024 ರಂದು ಕೋಲ್ಕತ್ತಾದ ಆರ್ ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ್ದಾಗಿದೆ. ಈ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದ ಕಿರಿಯ ವೈದ್ಯೆಯ ದೇಹವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
ಘಟನೆಯ ನಂತರ ಕೊಲ್ಕತ್ತಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ದೇಶದ ವಿವಿಧ ಭಾಗಗಳಲ್ಲಿ ವೈದ್ಯರು ವೈದ್ಯಕೀಯ ವೃತ್ತಿಪರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾನೂನುಗಳು ಮತ್ತು ರಕ್ಷಣೆಗೆ ಒತ್ತಾಯಿಸಿ ವೈದ್ಯಕೀಯ ಸಂಘಟನೆಗಳು ಮುಷ್ಕರ ನಡೆಸಿದವು.
ಪೊಲೀಸ್ ಸ್ವಯಂಸೇವಕನಾಗಿದ್ದ ಆರೋಪಿ ರಾಯ್‌ನನ್ನು ಘಟನೆಯ ಒಂದು ದಿನದ ನಂತರ ಆಗಸ್ಟ್ 10, 2024 ರಂದು ಕೋಲ್ಕತ್ತಾ ಪೊಲೀಸರು ಬಂಧಿಸಿದರು. ಪ್ರಕರಣದ ತನಿಖೆಯನ್ನು ಅಂತಿಮವಾಗಿ ಕಲ್ಕತ್ತಾ ಹೈಕೋರ್ಟ್‌ನಿಂದ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಗೆ ವರ್ಗಾಯಿಸಲಾಯಿತು.
ಪಶ್ಚಿಮ ಬಂಗಾಳದ ವಿಚಾರಣಾ ನ್ಯಾಯಾಲಯವು ರಾಯ್ ವಿರುದ್ಧ ಅತ್ಯಾಚಾರ ಮತ್ತು ಕೊಲೆಯ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿತು. ನವೆಂಬರ್ 12, 2024 ರಂದು ಆರಂಭಗೊಂಡ ವಿಚಾರಣೆಯು ಜನವರಿ 9 ರಂದು ಮುಕ್ತಾಯಗೊಂಡಿತು. ಆರೋಪಿಗೆ ಮರಣದಂಡನೆ ವಿಧಿಸುವಂತೆ ಸಿಬಿಐ ಕೋರಿತ್ತು .
ಏತನ್ಮಧ್ಯೆ, ಸಿಬಿಐ ಆರ್ ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಪೊಲೀಸ್ ಅಧಿಕಾರಿ ಅಭಿಜಿತ್ ಮಂಡಲ್ ಅವರನ್ನು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ ಆರೋಪದಡಿ ಬಂಧಿಸಲಾಗಿತ್ತು. ಆದರೆ, 90 ದಿನಗಳ ಗಡುವಿನೊಳಗೆ ಸಿಬಿಐ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಅವರಿಗೆ ಡಿಫಾಲ್ಟ್ ಜಾಮೀನು ಮಂಜೂರಾಯಿತು.
ಡಾ. ಘೋಷ್ ಅವರು ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಣಕಾಸಿನ ಅವ್ಯವಹಾರಗಳ ಆರೋಪದ ಪ್ರಕರಣವನ್ನೂ ಎದುರಿಸುತ್ತಿರುವುದರಿಂದ ಜೈಲಿನಲ್ಲಿಯೇ ಇದ್ದಾರೆ.
ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಸಹ ವೈದ್ಯರು, ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಕುರಿತ ಕಾಳಜಿಯ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಕೆಲಸದ ಸ್ಥಳದಲ್ಲಿ ಅಂತಹ ವೃತ್ತಿಪರರ ವಿರುದ್ಧ ಲಿಂಗಾಧರಿತ ಹಿಂಸಾಚಾರ ತಡೆಗಟ್ಟಲು ರಾಷ್ಟ್ರೀಯ ಕಾರ್ಯಪಡೆಯನ್ನು (ಎನ್‌ಟಿಎಫ್) ಸ್ಥಾಪಿಸಲು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತು.
ಎನ್‌ಟಿಎಫ್ ನವೆಂಬರ್ 2024 ರಲ್ಲಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದು, ಪ್ರಸ್ತುತ ಇದು ವಿವಿಧ ರಾಜ್ಯಗಳ ಪರಿಗಣನೆಯಲ್ಲಿದೆ.