Calcutta High Court with RG Kar hospital 
ಸುದ್ದಿಗಳು

ಆರ್‌ ಜಿ ಕರ್ ಪ್ರಕರಣ: ಆರೋಪಿಗೆ ಮರಣದಂಡನೆ ವಿಧಿಸಲು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಪ. ಬಂಗಾಳ ಸರ್ಕಾರ ಮನವಿ

ಕುತೂಹಲಕರ ಸಂಗತಿ ಎಂದರೆ ಪ್ರಕರಣದ ತನಿಖೆ ಮಾಡಿ ದಾವೆ ನಡೆಸಿರುವುದು ಸಿಬಿಐ ವಿನಾ ರಾಜ್ಯ ಪೊಲೀಸರಲ್ಲ.

Bar & Bench

ಕೊಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ  ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಸೋಮವಾರ ರಾಯ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.

ಆದರೆ  ಅಪರಾಧ ಕ್ರೂರ ಮತ್ತು ಪೈಶಾಚಿಕವಾಗಿದ್ದರೂ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬ ವರ್ಗಕ್ಕೆ ಸೇರದೇ ಇರುವುದರಿಂದ ಮರಣ ದಂಡನೆ ವಿಧಿಸಲಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಇಂದು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ದೇಬಾಂಗ್ಶು ಬಸಾಕ್ ನೇತೃತ್ವದ ಪೀಠದೆದುರು ಈ ಕುರಿತು ಉಲ್ಲೇಖಿಸಿದ ರಾಜ್ಯ ಸರ್ಕಾರ ಮರಣ ದಂಡನೆ ವಿಧಿಸುವಂತೆ ಕೋರಿ ಮನವಿ ಸಲ್ಲಿಸುವುದಾಗಿ ತಿಳಿಸಿತು.

ಇದಕ್ಕೂ ಮುನ್ನ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು.

ಪ್ರಕರಣ ಅಪರೂಪದಲ್ಲೇ ಅಪರೂಪದ ವರ್ಗಕ್ಕೆ ಸೇರುವುದಿಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿರುವುದು ತನಗೆ ಆಘಾತ ತಂದಿದೆ. ಇದು ನಿಜಕ್ಕೂ ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ನನಗೆ ಮನವರಿಕೆಯಾಗಿದೆ. ಅಪರೂಪದ ಪ್ರಕರಣವಲ್ಲ ಎಂಬ ತೀರ್ಮಾನಕ್ಕೆ ತೀರ್ಪು ಹೇಗೆ ಬರಲು ಸಾಧ್ಯ? ಎಂದು ಮಮತಾ ಪ್ರಶ್ನಿಸಿದ್ದರು.

ಕುತೂಹಲಕರ ಸಂಗತಿ ಎಂದರೆ ಕೊಲ್ಕತ್ತಾ ಪೊಲೀಸರಿಂದ ಸಿಬಿಐಗೆ ಕಲ್ಕತ್ತಾ ಹೈಕೋರ್ಟ್‌ ಪ್ರಕರಣದ ತನಿಖೆಯನ್ನು ವರ್ಗಾಯಿಸಿದ್ದು  ಪ್ರಕರಣದ ತನಿಖೆ ಮಾಡಿ, ದಾವೆ ನಡೆಸಿರುವುದು  ಸಿಬಿಐ ವಿನಾ ರಾಜ್ಯ ಪೊಲೀಸರಲ್ಲ.