Doctors 
ಸುದ್ದಿಗಳು

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಕಠಿಣ ಮುಂಜಾಗರೂಕತಾ ಕ್ರಮ ಕೋರಿ ಸುಪ್ರೀಂ ಮೊರೆ ಹೋದ ವೈದ್ಯಕೀಯ ಸಲಹೆಗಾರರು

ಅರ್ಜಿಯನ್ನು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ನಾಳೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Bar & Bench

ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದ 31 ವರ್ಷದ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಮೊಕದ್ದಮೆಯಲ್ಲಿ ಮಧ್ಯಪ್ರವೇಶ ಕೋರಿ ಭಾರತೀಯ ವೈದ್ಯಕೀಯ ಸಲಹೆಗಾರರ ಸಂಘಗಳ ಒಕ್ಕೂಟ ಅರ್ಜಿ ಸಲ್ಲಿಸಿದೆ [ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ವಯಂ ಪ್ರೇರಿತ ವಿಚಾರಣೆ].

ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮೊಕದ್ದಮೆಯನ್ನು ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿರುವ ಪೀಠ ನಾಳೆ (ಆಗಸ್ಟ್ 20) ವಿಚಾರಣೆ ನಡೆಸಲಿದೆ.

ಅರ್ಜಿಯ ಪ್ರಮುಖಾಂಶಗಳು

  • ಮೂಲಭೂತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಲೆಕ್ಕವಿಲ್ಲದಷ್ಟು ಬಾರಿ ಬೇಡಿಕೆ ಇಟ್ಟಿದ್ದರೂ ದೇಶದಲ್ಲಿ ಆರೋಗ್ಯ ವೃತ್ತಿಪರರು ಅಪಾಯಕಾರಿ ಕೆಲಸದ ಸ್ಥಿತಿ ಎದುರಿಸುವುದು ಮುಂದುವರೆದಿದೆ.

  • ವೈದ್ಯರ ವಿರುದ್ಧದ ಹಿಂಸಾಚಾರ ದೀರ್ಘಕಾಲದಿಂದ ಬಗೆಹರಿಯದ ಸಮಸ್ಯೆಯಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಕಕತೆ ಇದೆ.

  • ಸುರಕ್ಷತೆ ಮತ್ತು ವೈದ್ಯಕೀಯ ಸಂಸ್ಥೆಗಳ ಅಖಂಡತೆ ಮೇಲಿನ ನಂಬಿಕೆ ಮತ್ತೆ ಮರುಕಳಿಸುವಂತಾಗಲೂ ಸದೃಢ ರಕ್ಷಣಾ ಕ್ರಮ ಅಗತ್ಯ.

  • ಸುಧಾರಿತ ಬೆಳಕಿನ ವ್ಯವಸ್ಥೆ, ಭದ್ರತಾ ಕ್ಯಾಮೆರಾಗಳ ಅಳವಡಿಕೆ ಅನೇಕ ಸಂಸ್ಥೆಗಳಲ್ಲಿ ಆಗಿಲ್ಲ.

  • ಆರೋಗ್ಯ ಇಲಾಖೆಯಿಂದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು ಭೌಗೋಳಿಕವಾಗಿ ದೂರ ಇರುವೆಡೆ ಅಲ್ಲಿನ  ವೈದ್ಯರು, ದಾದಿಯರು ಮತ್ತಿತರ  ಆರೋಗ್ಯ ಕಾರ್ಯಕರ್ತರ ಸಮಸ್ಯೆ ಇನ್ನಷ್ಟು ಹೆಚ್ಚಿರುತ್ತದೆ.

  • ರೋಗಿಗಳ ದಾಳಿಯಿಂದ ವೈದ್ಯಕೀಯ ವೃತ್ತಿಪರರ ಸಾವುನೋವುಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಕೃತ ದಾಖಲೆಗಳಾಗಲೀ, ಅಂತಹ ಘಟನೆಗಳನ್ನು ನಿಗ್ರಹಿಸುವ ಕಾಯಿದೆಗಳಾಗಲೀ ಇಲ್ಲ.

  • ಕೇಂದ್ರೀಕೃತ ದಾಖಲೆಗಳು ಇಲ್ಲದಿರುವುದರಿಂದ ಕೇಂದ್ರ ಸರ್ಕಾರ ತುರ್ತಾಗಿ ಮತ್ತು ಸಮನ್ವಯದಿಂದ ಬಿಕ್ಕಟ್ಟು ಪರಿಹರಿಸುವುದು ಅಸಾಧ್ಯವಾಗುತ್ತದೆ.

  • ಎಲ್ಲಾ ರಾಜ್ಯಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಒಂದೇ ರೀತಿಯಲ್ಲಿ ಅನ್ವಯವಾಗುವ ಕಠಿಣ ಏಕರೂಪದ ಮಾರ್ಗಸೂಚಿಗಳನ್ನು ಹೊರಡಿಸುವ ತುರ್ತು ಅವಶ್ಯಕತೆಯಿದೆ.

  • ಇದಲ್ಲದೆ, ಈ ಕೇಂದ್ರೀಕೃತ ಮಾರ್ಗಸೂಚಿಗಳ ಪಾಲನೆಗಾಗಿ ನಿಯಮಿತ ಪರಿಶೀಲನೆ ನಡೆಯಬೇಕು.

  • ಆರೋಗ್ಯ ಕಾರ್ಯಕರ್ತರ ವಿರುದ್ಧದ ಹಿಂಸಾಚಾರದ ಕೃತ್ಯಗಳಿಗೆ ಭಾರೀ ದಂಡ ವಿಧಿಸುವ ಕಾಯಿದೆ ಜಾರಿಗೆ ಬರಬೇಕು.

  • ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಯುವ ವೈದ್ಯರು ವೃತ್ತಿ ತೊರೆಯಬಹುದು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರ ನೈತಿಕತೆ ಒಟ್ಟಾರೆಯಾಗಿ ಕುಸಿಯಬಹುದು.