ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸ್ಥಾನಿಕ ವೈದ್ಯೆಯ ಹೆಸರು, ಫೋಟೋ, ವಿಡಿಯೋ ಮತ್ತಿತರ ಮಾಹಿತಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಸುದ್ದಿ ಮತ್ತ ಸಾಮಾಜಿಕ ಮಾಧ್ಯಮ ಜಾಲತಾಣಗಳಿಗೆ ಮಂಗಳವಾರ ಆದೇಶಿಸಿದೆ [ಕಿನ್ನೋರಿ ಘೋಷ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ಮೃತ ಸಂತ್ರಸ್ತೆಯ ಹೆಸರು ಮತ್ತು ಗುರುತು ಬಹಿರಂಗಪಡಿಸುವುದನ್ನು ವಿರೋಧಿಸಿ ವಕೀಲರಿಬ್ಬರು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಮೃತರ ಶವದ ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ನಿಪುಣ್ ಸಕ್ಸೇನಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೇಳಿದ್ದರು. ಅತ್ಯಾಚಾರ ಸಂತ್ರಸ್ತರ ಗುರುತನ್ನು ಮುಚ್ಚಿಡಬೇಕು ಮಾಧ್ಯಮಗಳು ಅದನ್ನು ಬಹಿರಂಗಪಡಿಸಬಾರದು ಎಂದು ತೀರ್ಪಿನಲ್ಲಿ ನಿರ್ದೇಶಿಸಲಾಗಿತ್ತು.
ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆ ಏನು ಹೇಳುತ್ತದೆ ಎಂದು ಪೀಠವು ಅರ್ಜಿದಾರರ ಪರ ವಕೀಲರನ್ನು ಕೇಳಿತು. ಗುರುತನ್ನು ಬಹಿರಂಗಪಡಿಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಉತ್ತರಿಸಿದರು.
ಬಳಿಕ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಹೆಸರು, ಫೋಟೋಗಳು ಮತ್ತು ವಿಡಿಯೋಗಳು ಸೇರಿದಂತೆ ಮೃತ ಸಂತ್ರಸ್ತೆಯ ಎಲ್ಲಾ ಮಾಹಿತಿಯನ್ನು ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶಿಸಿತು.
ನಿಪುಣ್ ಸಕ್ಸೇನಾ ಪ್ರಕರಣದ ತೀರ್ಪು ಮಾತ್ರವಲ್ಲದೆ ಕೇಂದ್ರ ಗೃಹ ಸಚಿವಾಲಯ 16 ಜನವರಿ 2019ರಲ್ಲಿ ಈ ಕುರಿತು ನಿರ್ದೇಶನವನ್ನು ಹೊರಡಿಸಿದೆ. ಭಾರತೀಯ ನ್ಯಾಯ್ ಸಂಹಿತಾ 2023 ರ ಸೆಕ್ಷನ್ 72 (1)ರ ನಿಯಮಾವಳಿಯಂತೆ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.