ಮಕ್ಕಳನ್ನು ದತ್ತು ಪಡೆಯುವ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಈಚೆಗೆ ತಿಳಿಸಿರುವ ದೆಹಲಿ ಹೈಕೋರ್ಟ್ ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿದವರು 'ಸಾಮಾನ್ಯ ಮಗುವಿನ' ದತ್ತು ಸ್ವೀಕಾರ ನಿಷೇಧಿಸಿ 2015ರ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯಡಿ ಹೊರಡಿಸಲಾದ ದತ್ತು ನಿಯಮಗಳಿಗೆ ಮಾಡಿದ ಬದಲಾವಣೆಗಳನ್ನು ಎತ್ತಿಹಿಡಿದಿದೆ.
ಸಾಮಾನ್ಯ ಮಗು ಎಂದರೆ ವಿಕಲಚೇತನರ ಹಕ್ಕುಗಳ ಕಾಯಿದೆಯಡಿ ಉಲ್ಲೇಖಿಸಲಾದ ಯಾವುದೇ ಅಂಗವೈಕಲ್ಯದಿಂದ ಬಳಲದೇ ಇರುವ ಮಗುವಾಗಿದೆ.
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಸಂಚಾಲನಾ ಸಮಿತಿಯ ನಿರ್ಧಾರ ಎತ್ತಿಹಿಡಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ , ನಿಯಮಾವಳಿ ಬದಲಾವಣೆ ಜಾರಿಗೂ ಮುನ್ನ ಸ್ವೀಕರಿಸಲಾದ ಅರ್ಜಿಗಳು ಮತ್ತು ನೋಂದಾಯಿಸಲಾದ ನಿರೀಕ್ಷಿತ ದತ್ತು ಪೋಷಕರು (ಪಿಎಪಿಗಳು) ಕೂಡ ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿದ್ದರೆ ಸಾಮಾನ್ಯ ಮಗು ದತ್ತು ಪಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ವಿಶೇಷ ಮಕ್ಕಳನ್ನು ಹೆಚ್ಚು ಹೆಚ್ಚು ದತ್ತು ತೆಗೆದುಕೊಳ್ಳುವಂತೆ ಮಾಡಲು ನೀತಿಯಲ್ಲಿ ಬದಲಾವಣೆ ತರಲಾಗಿರುವುದರಿಂದ ಈಗಾಗಲೇ ಬಾಕಿ ಇರುವ ಅರ್ಜಿಗಳಿಗೆ ಸಹ ಈ ನೀತಿಯನ್ನು ಅನ್ವಯಿಸುವ ನಿರ್ಧಾರವನ್ನು ನಿರಂಕುಶ ಎಂದು ಕರೆಯಲಾಗುವುದಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
ಒಂದು ಜೈವಿಕ ಮಗುವೂ ಇಲ್ಲದವರು ಸೇರಿದಂತೆ ಮಕ್ಕಳ ನಿರೀಕ್ಷೆಯಲ್ಲಿರುವ ಪೋಷಕರು ಮತ್ತು ಸಾಮಾನ್ಯ ಮಗುವನ್ನು ದತ್ತು ಪಡೆಯುವ ನಿರೀಕ್ಷೆಯಲ್ಲಿರುವ ಪಿಎಪಿಗಳ ಸಂಖ್ಯೆಯ ನಡುವೆ ಗಂಭೀರ ಅಸಮತೋಲನ ಇದ್ದು, ಹೀಗಾಗಿ ಸಮತೋಲಿತ ವಿಧಾನವನ್ನು ಸ್ವಾಗತಿಸಬೇಕು.
ಒಂದು ಜೈವಿಕ ಮಗುವೂ ಇಲ್ಲದವರು ಸೇರಿದಂತೆ ಮಕ್ಕಳ ನಿರೀಕ್ಷೆಯಲ್ಲಿರುವ ಪೋಷಕರ ದೀರ್ಘ ಕಾಯುವಿಕೆಯನ್ನು ಸಾಮಾನ್ಯ ಮಕ್ಕಳನ್ನು ದತ್ತು ಪಡೆಯುವ ನಿರೀಕ್ಷೆಯಲ್ಲಿರುವ ಪೋಷಕರ ನಡುವೆ ಗಂಭೀರ ಅಸಮತೋಲನ ಇರುವ ಹಿನ್ನೆಲೆಯಲ್ಲಿ ನೋಡಬೇಕು. ಆದ್ದರಿಂದ ಒಂದು ಮಗು ಇರುವ ಅಥವಾ ಅದೂ ಇಲ್ಲದಿರುವವರ ಕಾಯುವಿಕೆಯನ್ನು ಕಡಿಮೆ ಮಾಡುವ ಮತ್ತು ಈಗಾಗಲೇ ಜೈವಿಕ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವ ಕುಟುಂಬದೊಂದಿಗೆ ಸೇರಿಕೊಳ್ಳುವಂತೆ ಮಗುವಿನ ಹಿತಾಸಕ್ತಿ ಕಾಯುವಂತಹ ಸಮತೋಲಿತ ವಿಧಾನವನ್ನು ಸ್ವಾಗತಿಸಬೇಕು ಎಂದು ನ್ಯಾಯಾಲಯ ನುಡಿದಿದೆ.
ದತ್ತು ಪಡೆಯುವ ಹಕ್ಕನ್ನು ಸಂವಿಧಾನದ 21ನೇ ವಿಧಿ (ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕಿನ ಸ್ಥಾನಮಾನಕ್ಕೆ ಏರಿಸಲಾಗದು ಅಥವಾ ಯಾರನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಆಯ್ಕೆಯನ್ನು ಪಿಎಪಿಗಳಿಗೆ ನೀಡುವ ಮಟ್ಟಕ್ಕೆ ಅದನ್ನು ಹೆಚ್ಚಿಸಲಾಗದು ಎಂದು ನ್ಯಾಯಮೂರ್ತಿ ಪ್ರಸಾದ್ ಅಭಿಪ್ರಾಯಪಟ್ಟರು.
ದತ್ತು ನಿಯಮಾವಳಿ 2022 ಕಾರ್ಯವಿಧಾನದ ಸ್ವರೂಪದಲ್ಲಿದ್ದು ಪೂರ್ವಕ್ರಿಯಾನ್ವಯವೇ (Retroactive) ವಿನಾ ಪೂರ್ವಾನ್ವಯವಾಗುವುದಿಲ್ಲ (Retrospective) ಎಂದು ಅದು ತೀರ್ಪು ನೀಡಿತು.
ಇಬ್ಬರು ಮಕ್ಕಳಿದ್ದರೂ ಮೂರನೇ ಮಗು ದತ್ತು ಪಡೆಯಲು ಬಯಸಿ ಪೋಷಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]