ಸುದ್ದಿಗಳು

ಅರಣ್ಯ ಭೂಮಿ ಹೊಂದುವ ಹಕ್ಕು ಆದಿವಾಸಿಗಳು ಮತ್ತು ಅಧಿಸೂಚಿತ ಅರಣ್ಯವಾಸಿಗಳಿಗೆ ಮಾತ್ರವೇ ಸೀಮಿತವಲ್ಲ: ಸುಪ್ರೀಂ

Bar & Bench

ಅಧಿಸೂಚಿತ ಮೀಸಲು ಅರಣ್ಯಗಳಲ್ಲಿ ಭೂಮಿ ಹೊಂದುವ ಹಕ್ಕು ಆದಿವಾಸಿಗಳಿಗೆ, ಅಧಿಸೂಚಿತ ಅರಣ್ಯವಾಸಿಗಳಿಗೆ ಅಥವಾ ಹಿಂದುಳಿದ ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ ನ್ಯಾಯಸಮ್ಮತವಾದ ಹಕ್ಕುಗಳನ್ನು ಹೊಂದಿರುವ ಯಾರಿಗಾದರೂ ಅಂತಹ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಹರಿ ಪ್ರಸಾದ್ ಶುಕ್ಲಾ ಇತರರು ಹಾಗೂ  ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ.]

ಅಂತಹ ಅಧಿಸೂಚಿತ ಸಮುದಾಯಗಳಿಗೆ ಸೇರದ ವ್ಯಕ್ತಿಗಳು ಕೂಡ ತಾವು ಹೊಂದಿರುವ ಅರಣ್ಯ ಭೂಮಿಯಿಂದ ತಮ್ಮನ್ನು ಹೊರಹಾಕುವ ಮೊದಲು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ತೆರವು ಮಾಡುವ ಮೊದಲು ಅರಣ್ಯ ಇಲಾಖೆ ಅವರ ಆಕ್ಷೇಪಣೆಗಳನ್ನು ಆಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿದೆ.

"ಅರಣ್ಯ ಕಾಯಿದೆಯ ಸೆಕ್ಷನ್ 4ರ ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ ಭೂಮಿಯನ್ನು ಹೊಂದುವ ಹಕ್ಕು ಕೇವಲ ಆದಿವಾಸಿ ಸಮುದಾಯಗಳು ಮತ್ತಿತರ ಅರಣ್ಯ ವಾಸಿ ಸಮುದಾಯಗಳಿಗೆ ಸೀಮಿತವಾಗಿಲ್ಲ ಬದಲಿಗೆ ಅದು ನಿವಾಸದ ಪುರಾವೆ, ಮೂಲ ಸ್ವಾಧೀನದ ದಿನಾಂಕ ಇತ್ಯಾದಿಗಳನ್ನು ಆಧರಿಸಿದೆ. ಅಂತಹ ಭೂಮಿಯಲ್ಲಿ ವಾಸಿಸುವುದು ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ, ಅಂತಹ ಹಕ್ಕು ಕೇಳುವ ಅಧಿಕಾರವನ್ನು ಹೇಗೆ ನಿರ್ಬಂಧಿಸಲು ಸಾಧ್ಯ ”ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅರಣ್ಯ ಸಮುದಾಯಗಳು ಕೇವಲ ಮಾನ್ಯತೆ ಪಡೆದ ಆದಿವಾಸಿಗಳು ಮತ್ತಿತರ ಹಿಂದುಳಿದ ಸಮುದಾಯಗಳನ್ನು ಒಳಗೊಂಡಿರುವುದಿಲ್ಲ. ಇವು ಅರಣ್ಯ ಭೂಮಿಯಲ್ಲಿ ವಾಸಿಸುವ ಇತರ ಗುಂಪುಗಳನ್ನು ಕೂಡ ಒಳಗೊಂಡಿವೆ ಎಂದು ನ್ಯಾಯಾಲಯ ವಿವರಿಸಿದೆ.

ನಿರ್ದಿಷ್ಟ ಅರಣ್ಯ ಭೂಮಿಯ ʼಭೂಮಿದಾರʼರು (ಭೂಮಾಲೀಕರು)ಎಂದು ಹೇಳಿಕೊಂಡಿದ್ದ ಕೆಲ ವ್ಯಕ್ತಿಗಳನ್ನು ಅರಣ್ಯಭೂಮಿಯಿಂದ ಹೊರಹಾಕಲು ಅವಕಾಶ ಮಾಡಿಕೊಟ್ಟ 2013ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಪುರಸ್ಕರಿಸುವ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪರಾಮರ್ಶಿಸುವಲ್ಲಿ ಹೈಕೋರ್ಟ್‌ ಎಡವಿದೆ ಎಂದಿರುವ ಪೀಠ, ಉಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಬದಿಗೆ ಸರಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Hari_Prasad_Shukla_and_ors_vs_State_of_Uttar_Pradesh_and_anr.pdf
Preview