Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi 
ಸುದ್ದಿಗಳು

ಕಡ್ಡಾಯ ಶಿಕ್ಷಣ ಹಕ್ಕು: ಶಾಲೆಯಿಂದ ಹೊರಗುಳಿದಿರುವ 17,266 ಮಕ್ಕಳು ಶಾಲೆಗೆ ದಾಖಲು; ಹೈಕೋರ್ಟ್‌ಗೆ ಸರ್ಕಾರದ ವಿವರಣೆ

Bar & Bench

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಒಟ್ಟು 24 ಸಾವಿರಕ್ಕೂ ಅಧಿಕ ಮಕ್ಕಳ ಪೈಕಿ 21,407 ಮಕ್ಕಳನ್ನು ಗುರುತಿಸಲಾಗಿದೆ ಹಾಗೂ 6 ವರ್ಷದಿಂದ 14 ವರ್ಷ ವಯೋಮಿತಿಯ 17,266 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ನಿಯಮಗಳ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ರಾಜ್ಯ ಶಾಲಾ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಡಾ.ಆರ್ ವಿಶಾಲ್ ಸಲ್ಲಿಸಿದ ಅಫಿಡವಿಟ್‌ ಅನ್ನು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಅವರು ನ್ಯಾಯಾಲಯಕ್ಕೆ ಒದಗಿಸಿದರು.

ಹೈಕೋರ್ಟ್ 2022ರ ನವೆಂಬರ್‌ 8ರಂದು ನೀಡಿರುವ ನಿರ್ದೇಶನದಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಸರ್ವೇ ನಡೆಸಿದ್ದವು. ಸರ್ವೇಯಿಂದ ರಾಜ್ಯದಲ್ಲಿ ಒಟ್ಟು 24,308 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ವಿಚಾರ ತಿಳಿದುಬಂತು. ಅದರಲ್ಲಿ 21,407 ಮಕ್ಳಳನ್ನು ಗುರುತಿಸಲಾಗಿದೆ. ಇನ್ನೂ 2,901 ಮಕ್ಕಳನ್ನು ಗುರುತಿಸಬೇಕಿದೆ. ವಿಳಾಸ ಮತ್ತು ಫೋನ್ ನಂಬರ್ ತಪ್ಪಾಗಿ ನೀಡಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 2,254 ಮಕ್ಕಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ, 6ರಿಂದ 14 ವರ್ಷ ವಯೋಮಿತಿಯ ಒಟ್ಟು 17,266 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. 1,813 ಮಕ್ಕಳು ವಲಸೆ ಹೋಗಿದ್ದಾರೆ. 259 ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಾರೆ. ಮುಕ್ತ ಶಾಲೆಗೆ 29 ಹಾಗೂ ಮದರಸಾಕ್ಕೆ 120 ಮಕ್ಕಳನ್ನು ದಾಖಲಿಸಲಾಗಿದೆ. 127 ಮಕ್ಕಳು ಸಾವನ್ನಪ್ಪಿದ್ದು, 37 ಮಕ್ಕಳು 6 ವರ್ಷಕ್ಕಿಂತ ಕಡಿಮೆ ವಯೋಮಾನದವರು. 1,756 ಮಕ್ಕಳು 14 ವರ್ಷ ಮೀರಿದವರು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇನ್ನೂ 3ರಿಂದ 6 ವರ್ಷ ವಯೋಮಿತಿಯ 5,19,369 ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ದಾಖಲಾಗಿದ್ದಾರೆ. 51,084 ಮಕ್ಕಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. 7,747 ಮಕ್ಕಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. 11,174 ಮಕ್ಕಳು 6 ವರ್ಷ ಮೀರಿದ್ದು, ಅದರಲ್ಲಿ 211 ಮಕ್ಕಳು ಎರಡು ಕೇಂದ್ರಗಳಲ್ಲಿ ನೋಂದಣಿಯಾಗಿದ್ದಾರೆ. 149 ಮಕ್ಕಳು ಮೃತಪಟ್ಟಿದ್ದಾರೆ. 987 ಮಕ್ಕಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವರದಿಯಲ್ಲಿ ತಪ್ಪಾಗಿ ನಮೂದಿಸಲಾಗಿದೆ. 72 ಮಕ್ಕಳು ಪತ್ತೆಯಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಇದನ್ನು ದಾಖಲಿಸಿಕೊಂಡ ಪೀಠವು ಅರ್ಜಿ ವಿಚಾರಣೆಯನ್ನು ಮೂರು ವಾರ ಮುಂದೂಡಿತು.